ವೈಜಾಗ್(ಆಂಧ್ರಪ್ರದೇಶ): ಶೌಚಾಲಯವೊಂದರಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಂಡು ಬಂದಿದ್ದು, ಇದನ್ನ ನೋಡಿರುವ ಮನೆ ಮಾಲೀಕ ಸೇರಿದಂತೆ ಅನೇಕರು ಕಕ್ಕಾಬಿಕ್ಕಿಯಾಗಿದ್ದಾರೆ. ಸುಮಾರು 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿರುವ ಅರಣ್ಯ ಸಿಬ್ಬಂದಿ ತದನಂತರ ಕಾಡಿಗೆ ಬಿಟ್ಟು ಬಂದಿದ್ದಾರೆ.
ವಿಶಾಖಪಟ್ಟಣಂ ಜಿಲ್ಲೆಯ ಮರೆಪಲ್ಲೆ ಗ್ರಾಮದ ವ್ಯಕ್ತಿಯೊಬ್ಬನ ಮನೆಯ ಶೌಚಾಲಯದಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಯಾವ ರೀತಿಯಾಗಿ ಈ ಸ್ಥಳಕ್ಕೆ ಬಂದಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಮಾಹಿತಿ ಗೊತ್ತಾಗುತ್ತಿದ್ದಂತೆ ಜನರು ತಂಡೋಪತಂಡವಾಗಿ ಸ್ಥಳಕ್ಕಾಗಮಿಸಿದ್ದಾರೆ. ಅರಣ್ಯಾಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಬಳಿಕ ಸುಮಾರು 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಅದನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಾದ ಬಳಿಕ ಕಾಡಿಗೆ ಬಿಡಲಾಗಿದೆ.
ಇದನ್ನೂ ಓದಿರಿ: ಮೊಟ್ಟೆ ತಂದ ಆಪತ್ತು: ತಿನ್ನುವ ವೇಳೆ ಗಂಟಲಿನಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ ಮಹಿಳೆ
ಇದರ ಬಗ್ಗೆ ಮಾತನಾಡಿರುವ ವನ್ಯಜೀವಿ ಅಧಿಕಾರಿಗಳು, ಕಾಳಿಂಗ ಸರ್ಪಗಳು ಹೆಚ್ಚಾಗಿ ಪೂರ್ವ ಘಟ್ಟಗಳು ಮತ್ತು ಆಗ್ನೇಯ ಏಷ್ಯಾ ದೇಶಗಳಲ್ಲಿ ಕಂಡು ಬರುತ್ತವೆ. ಕಾಳಿಂಗ ಸರ್ಪ ಬೇರೆ ಹಾವುಗಳನ್ನ ಮಾತ್ರ ಆಹಾರವಾಗಿ ಸೇವನೆ ಮಾಡುವುದರಿಂದ ವರ್ಷಕ್ಕೆ 350 ಹಾವುಗಳನ್ನು ತಿನ್ನುತ್ತದೆ ಎಂದು ತಿಳಿಸಿದ್ದಾರೆ.