ಕೇದಾರನಾಥ (ಉತ್ತರಾಖಂಡ): ಪ್ರಸಿದ್ಧ ಹಿಂದೂ ಧಾರ್ಮಿಕ ಕ್ಷೇತ್ರ ಉತ್ತರಾಖಂಡದ ಕೇದಾರನಾಥ ದೇವಸ್ಥಾನದ ಗರ್ಭಗುಡಿಗೆ ಚಿನ್ನದ ಲೇಪನ ಮಾಡಲಾಗಿದೆ. ಗರ್ಭಗುಡಿಯ ಗೋಡೆಗಳು ಮತ್ತು ಛಾವಣಿಗೆ 550 ಚಿನ್ನದ ಪದರಗಳೊಂದಿಗೆ ಹೊಸ ರೂಪ ನೀಡಲಾಗಿದೆ.
ಮಹಾರಾಷ್ಟ್ರದ ದಾನಿಗಳ ನೆರವಿನಿಂದ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ಚಿನ್ನದ ಲೇಪನ ಈ ಕಾರ್ಯ ನೆರವೇರಿಸಿತು. ಬುಧವಾರ ಬೆಳಗ್ಗೆ ಇಬ್ಬರು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಕೊನೆಯ ಹಂತದ ಅಳವಡಿಕೆ ಕಾರ್ಯ ಮುಗಿದಿದೆ.
ಮೂರು ದಿನಗಳ ಹಿಂದೆ 18 ಕುದುರೆಗಳು ಹಾಗೂ ಹೇಸರಗತ್ತೆಗಳ ಮೇಲೆ ಹೊತ್ತ ಚಿನ್ನವನ್ನು ಕೇದಾರನಾಥಕ್ಕೆ ಸಾಗಿಸಲಾಗಿತ್ತು. 19 ಜನ ಕುಶಲಕರ್ಮಿಗಳು ಕಳೆದ ಮೂರು ದಿನಗಳ ಕಾಲ ಚಿನ್ನದ ಪದರಗಳಿಂದ ದೇಗುಲವನ್ನು ಸಿಂಗರಿಸಿದರು ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ತಿಳಿಸಿದರು.
ಇದನ್ನೂ ಓದಿ: ಬದರಿನಾಥ, ಕೇದಾರನಾಥ ಕ್ಷೇತ್ರಕ್ಕೆ ಮುಖೇಶ್ ಅಂಬಾನಿ ಕುಟುಂಬ ಭೇಟಿ: 5 ಕೋಟಿ ದೇಣಿಗೆ
ಅಕ್ಟೋಬರ್ 21ರಂದು ಪ್ರಧಾನಿ ನರೇಂದ್ರ ಮೋದಿ ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಗರ್ಭಗುಡಿಯಲ್ಲಿ ಶಿವನಿಗೆ ರುದ್ರಾಭಿಷೇಕ ಪೂಜೆ ನೆರವೇರಿಸಿ, ನಡೆಯುತ್ತಿರುವ ಪುನರ್ ನಿರ್ಮಾಣ ಕಾರ್ಯಗಳ ಪರಿಶೀಲನೆ ನಡೆಸಿದ್ದರು.
ಈ ಸಂದರ್ಭದಲ್ಲಿ ಪ್ರಧಾನಿ 1,267 ಕೋಟಿ ರೂ. ವೆಚ್ಚದ ಗೌರಿಕುಂಡ್-ಕೇದಾರನಾಥ ನಡುವಿನ 9.7 ಕಿಮೀ ಉದ್ದದ ರೋಪ್‌ವೇಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ರೋಪ್ವೇ ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು 6-7 ಗಂಟೆಗಳಿಂದ ಕೇವಲ 30 ನಿಮಿಷಗಳಿಗೆ ತಗ್ಗಿಸಲಿದೆ.
ಇದನ್ನೂ ಓದಿ: ಚೋಲಾ ಡೋರಾ ಉಡುಪು ಬಳಿಕ, ಕೇದಾರನಾಥ ದೇಗುಲ ಮುಂದಿನ ಮೋದಿ ಚಿತ್ರಕ್ಕೆ ಆಕ್ಷೇಪ