ಪೂರ್ವ ಗೋದಾವರಿ(ಆಂಧ್ರಪ್ರದೇಶ): ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಲು ಇದೀಗ ಹೆಬ್ಬೆರಳಿನ ಗುರುತು ನೀಡುವುದು ಅನಿವಾರ್ಯ. 60 ವರ್ಷ ಮೇಲ್ಪಟ್ಟ ವೃದ್ಧರು ತಮ್ಮ ತಿಂಗಳ ಪಿಂಚಣಿ ಹಣ ಪಡೆದುಕೊಳ್ಳಲು ಹೆಬ್ಬೆಟ್ಟು ನೀಡುತ್ತಾರೆ. ಹೀಗೆ ತಮ್ಮ ಹೆಬ್ಬೆರಳ ಗುರುತು ನೀಡಿದ ಆಂಧ್ರಪ್ರದೇಶದ ಪೂರ್ವ ಗೋದಾವರಿಯ ವೃದ್ಧೆಯೋರ್ವರು ವಂಚನೆಗೊಳಗಾಗಿದ್ದಾರೆ.
ಪೂರ್ವ ಗೋದಾವರಿ ಕಾಕಿನಾಡಿನ ಗಂಗನಪಲ್ಲಿಯಲ್ಲಿ ವಾಸವಾಗಿರುವ ವೃದ್ಧೆ ಮಂಗಾಯಮ್ಮ(75) ಅವರ ಹೆಬ್ಬೆರಳಿನ ಗುರುತು ಪಡೆದುಕೊಂಡು ಸ್ವಯಂಸೇವಕನೋರ್ವ ವಂಚಿಸಿರುವ ಆರೋಪ ಕೇಳಿ ಬಂದಿದೆ. ಪ್ರತಿ ತಿಂಗಳು ಮಂಗಾಯಮ್ಮ ರಾಜ್ಯ ಸರ್ಕಾರದ ಪಿಂಚಣಿ ಹಣ ಪಡೆದುಕೊಳ್ಳುತ್ತಿದ್ದಾರೆ. ಸ್ವಯಂಸೇವಕ ರವಿಕುಮಾರ್ ಎಂಬಾತ ಕಳೆದ ಜನವರಿ ತಿಂಗಳು ಆಕೆಯ ಬಳಿ ಬಂದು, ಪಿಂಚಣಿ ಮೊತ್ತ ಏರಿಕೆ ಮಾಡಲಾಗಿದ್ದು, ಕೆಲವೊಂದಿಷ್ಟು ದಾಖಲೆಗಳನ್ನು ನವೀಕರಿಸಬೇಕಾಗಿದ್ದು ಹೆಬ್ಬೆಟ್ಟು ನೀಡುವಂತೆ ಕೇಳಿದ್ದಾನೆ. ಇದರ ಜೊತೆಗೆ, ಬಿಳಿ ಹಾಳೆಯ ಮೇಲೆ ಆಕೆಯ ಹೆಬ್ಬೆರಳಿನ ಗುರುತು ತೆಗೆದುಕೊಂಡಿದ್ದಾನೆ.
ಇದನ್ನೂ ಓದಿ: ದೇಶದಲ್ಲಿ ತಿಂಗಳಿಗೊಮ್ಮೆ ಚುನಾವಣೆ ನಡೆಯಲಿ: ಬೆಲೆ ಏರಿಕೆ ಬಗ್ಗೆ ಸಂಸದೆ ಸುಪ್ರಿಯಾ ಸುಳೆ ವ್ಯಂಗ್ಯ
ಇದಾದ ಕೆಲ ದಿನಗಳ ನಂತರ ವೃದ್ದೆಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬ ಸಂದೇಶ ಬಂದಿದೆ. ಇದರಿಂದ ಮಗ ವಿಶ್ವನಾಥಂ ಹಾಗೂ ವೃದ್ಧೆ ಬೆಚ್ಚಿಬಿದ್ದಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ವಿಶ್ವನಾಥಂ ಪತ್ನಿ ದೂರವಾಗಿದ್ದು, ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿಯೂ ಈಕೆ ಗೆಲುವು ದಾಖಲು ಮಾಡಿದ್ದಾಳೆ. ಈಕೆ ನಮ್ಮ ಬಳಿ ಇರುವ ಆಸ್ತಿ ಕಬಳಿಸುವ ಉದ್ದೇಶದಿಂದ ಈ ರೀತಿಯಾಗಿ ಮಾಡಿದ್ದಾಳೆಂದು ವೃದ್ಧೆ ಆರೋಪಿಸಿದ್ದಾರೆ.
'ನನಗೆ ಪಿಂಚಣಿ ಹಣ ನೀಡಿದ ಬಳಿಕ ಸ್ವಯಂಸೇವಕ ರವಿಕುಮಾರ್ ಬಿಳಿ ಕಾಗದದ ಮೇಲೆ ಹೆಬ್ಬೆರಳಿನ ಗುರುತನ್ನು ಎರಡು ಸಲ ತೆಗೆದುಕೊಂಡಿದ್ದ. ಕೆಲವೊಂದು ದಾಖಲಾತಿ ನವೀಕರಿಸುವ ಉದ್ದೇಶದಿಂದ ಗುರುತು ಪಡೆದುಕೊಳ್ಳಲಾಗುತ್ತಿದೆ' ಎಂದು ಆತ ಹೇಳಿರುವುದಾಗಿ ವೃದ್ಧೆ ತಿಳಿಸಿದ್ದಾರೆ.