ಡಯಾಬಿಟಿಸ್ ಜನರನ್ನು ಬಿಡದೇ ಕಾಡುವ ಹೆಮ್ಮಾರಿ ಕಾಯಿಲೆ. ಟೈಪ್ 2 ಡಯಾಬಿಟಿಸ್ ವಿಶ್ವಾದ್ಯಂತ ಸುಮಾರು 480 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತಿದೆಯಂತೆ. 2045 ರ ವೇಳೆಗೆ 700 ಮಿಲಿಯನ್ ಜನರಲ್ಲಿ ಡಯಾಬಿಟಿಸ್ ಟೈಪ್ - 2 ಅಂಟಿಕೊಳ್ಳಲಿದೆ ಎಂದು ಅಂದಾಜು ಮಾಡಲಾಗಿದೆ.
ವಿಟಮಿನ್ ಡಿ ಕೊರತೆಯು ಭವಿಷ್ಯದ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕೆಲವು ಅಧ್ಯಯನಗಳಿಂದ ಗೊತ್ತಾಗಿದೆ. ಈ ಮಧ್ಯೆ ವಿಟಮಿನ್ ಡಿ ಪೂರಕಗಳ ಪ್ರಯೋಗಗಳು ಅಸಮಂಜಸ ಫಲಿತಾಂಶಗಳನ್ನು ನೀಡಿವೆ. BMJ ಪ್ರಕಟಿಸಿದ ಹೊಸ ಅಧ್ಯಯನದ ಪ್ರಕಾರ ವಯಸ್ಕರರಲ್ಲಿ ಪೂರಕಗಳು ಪ್ರಾಯೋಗಿಕವಾಗಿ ಅರ್ಥಪೂರ್ಣ ಪರಿಣಾಮ ಬೀರಿಲ್ಲ ಎಂದು ಕಂಡುಕೊಳ್ಳಲಾಗಿದೆ. ಆದರೆ ಸಾಕಷ್ಟು ಇನ್ಸುಲಿನ್ ಸ್ರವಿಸುವಿಕೆ ಹೊಂದಿರುವ ಜನರಿಗೆ ವಿಟಮಿನ್ ಡಿ ಯಿಂದ ಉಪಯೋಗವಿದೆ. ಆದಾಗ್ಯೂ ಈ ಸಂಶೋಧನೆ ಈ ಬಗ್ಗೆ ಸ್ಪಷ್ಟತೆಗೆ ಬರುವಲ್ಲಿ ವಿಫಲವಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಅಧ್ಯಯನ ನಡೆಸಿದ ತಂಡವು, ಜಪಾನ್‌ನಲ್ಲಿ ಆಸ್ಟಿಯೊಪೊರೋಸಿಸ್‌ಗೆ ಚಿಕಿತ್ಸೆ ನೀಡಲು ಬಳಸುವ ವಿಟಮಿನ್ ಡಿ ಯ ಸಕ್ರಿಯ ರೂಪವಾದ ಎಲ್ಡೆಕಾಲ್ಸಿಟಾಲ್ ಹಾಗೂ ದುರ್ಬಲಗೊಂಡ ಗ್ಲೂಕೋಸ್ ಹೊರ ಹಾಕುವ ಸಾಮರ್ಥ್ಯ ಹೊಂದಿರುವ ಜನರಲ್ಲಿ ಟೈಪ್ 2 ಮಧುಮೇಹ ಹಬ್ಬುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬ ಅಂಶವನ್ನು ಪತ್ತೆ ಹಚ್ಚಿದೆ.
ಜಪಾನಿನ ಮೂರು ಆಸ್ಪತ್ರೆಗಳಿಂದ ನೇಮಕಗೊಂಡ ದುರ್ಬಲ ಗ್ಲೂಕೋಸ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿರುವ 1,256 ಜಪಾನೀ ವಯಸ್ಕರನ್ನು ಅಧ್ಯಯನಕ್ಕೆ ಒಳಪಡಿಸಿ ಈ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ. ಮತ್ತೆ ಇವುಗಳನ್ನು ಎರಡು ಗುಂಪುಗಳಾಗಿ ಅಂದರೆ ಎಲ್ಡೆಕಾಲ್ಸಿಟಾಲ್ ಅಥವಾ ಪ್ಲಸೀಬೊ ಎಂಬುದಾಗಿ ವಿಂಗಡಿಸಲಾಗಿದೆ. ಮೂರು ವರ್ಷಗಳ ಅವಧಿಯ ಈ ಅಧ್ಯಯನದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಇವರಲ್ಲಿ ಮಧುಮೇಹಕ್ಕೆ ಸಂಬಂಧಿಸಿದಂತೆ ಚೆಕ್ ಅಪ್ ಮಾಡಿ ನಿರ್ಣಯ ಕೈಗೊಳ್ಳಲಾಗಿದೆ.
ಈ ಅವಧಿಯಲ್ಲಿ, ಮಧುಮೇಹ ಅಭಿವೃದ್ಧಿಪಡಿಸಿದವರಲ್ಲಿ ಅಥವಾ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಮಾನ್ಯ ಸ್ಥಿತಿಗೆ ಮರಳಿದ ಗುಂಪುಗಳ ನಡುವೆ ಯಾವುದೇ ಅರ್ಥಪೂರ್ಣ ವ್ಯತ್ಯಾಸಗಳನ್ನು ಸಂಶೋಧಕರಿಗೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಎಲ್ಡೆಕಾಲ್ಸಿಟಾಲ್ನೊಂದಿಗೆ ಚಿಕಿತ್ಸೆಯು ಪೂರ್ವ - ಮಧುಮೇಹ ಹೊಂದಿರುವ ಜನರಲ್ಲಿ ಮಧುಮೇಹದ ಸಂಭವವನ್ನು ಗಣನೀಯವಾಗಿ ಕಡಿಮೆ ಮಾಡದಿದ್ದರೂ, ಸಾಕಷ್ಟು ಇನ್ಸುಲಿನ್ ಸ್ರವಿಸುವಿಕೆಯೊಂದಿಗಿನ ಜನರ ಮೇಲೆ ಎಲ್ಡೆಕಾಲ್ಸಿಟಾಲ್ನ ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನು ಓದಿ:ಬೇಸಿಗೆಯಲ್ಲಿ ಹೊಟ್ಟೆ ನೋವು, ಇತರ ಸಮಸ್ಯೆಗಳು ಎದುರಾಗುತ್ತವೆಯೇ?: ತಕ್ಷಣ ವೈದ್ಯರ ಸಂಪರ್ಕಿಸಿ