ಅಜ್ಮೀರ್(ರಾಜಸ್ಥಾನ): ಅಕ್ಷಯ ತೃತೀಯದ ನಿಮಿತ್ತ ರಾಜ್ಯದಲ್ಲಿ ನಡೆಯುವ ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿತ್ತು. ಆದರೆ, ಈಗ ಆಡಳಿತಕ್ಕೆ ಕಪ್ಪುಚುಕ್ಕೆ ತರುವಂತಹ ಘಟನೆ ನಡೆದಿದೆ. ಅಕ್ಷಯ ತೃತೀಯ ದಿನ ನಡೆದಂತಹ ಬಾಲ್ಯವಿವಾಹದ ಎರಡು ವಿಡಿಯೋಗಳು ವೈರಲ್ ಆಗಿವೆ. ಈ ವಿಡಿಯೋಗಳಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ.
ಈ ವಿಡಿಯೋಗಳು ಪುಷ್ಕರ್ ಗ್ರಾಮದಲ್ಲಿ ನಡೆದ ಬಾಲ್ಯವಿವಾಹದ್ದು, ಇಲ್ಲಿ ಐದು ಜೋಡಿಗಳಿಗೆ ಮದುವೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಅಕ್ಷಯ ತೃತೀಯ ದಿನ ಬಾಲ್ಯವಿವಾಹ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತವೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬಾಲ್ಯವಿವಾಹಗಳನ್ನು ತಡೆಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗಳಿಗೆ ಸೂಚಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಪ್ರದೀಪ್ ದೇವ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ಬಾಲ್ಯವಿವಾಹ ನಿಷೇಧ ಕಾಯ್ದೆ 2006ರ ಅಡಿಯಲ್ಲಿ ಬಾಲ್ಯವಿವಾಹಗಳ ನಿಯಂತ್ರಣಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸುವಂತೆಯೂ ತಿಳಿಸಲಾಗಿದ್ದು, ಬಾಲ್ಯವಿವಾಹ ನಡೆದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: ಕಾಶ್ಮೀರದ ಅರಣ್ಯ ಪ್ರದೇಶದಲ್ಲಿ ಮೂವರು ಉಗ್ರರ ಎನ್‌ಕೌಂಟರ್ ಮಾಡಿದ ಸೇನೆ