ಹೈದರಾಬಾದ್: ಛತ್ತೀಸ್‌ಗಢದ ದಾಂತೇವಾಡದಲ್ಲಿ ಇತ್ತೀಚೆಗೆ ನಡೆದ ನಕ್ಸಲ್ ದಾಳಿಯ ಸಂದರ್ಭದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಬುಧವಾರ ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ 10 ಜನ ಪೊಲೀಸರು ಮತ್ತು ಓರ್ವ ನಾಗರಿಕ ಸಾವನ್ನಪ್ಪಿದ್ದಾರೆ. ಇದೀಗ ಆ ಸಂದರ್ಭದ ವಿಡಿಯೋ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ.
ಈ ವಿಡಿಯೋ ಮೂಲದ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆದರೆ ಸಾಮಾನ್ಯವಾಗಿ ಜಿಲ್ಲಾ ರಿಸರ್ವ್ ಗಾರ್ಡ್ (DRG) ಜವಾನನಿಂದ ಆ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೊರಬಿದ್ದಿರುವ ವಿಡಿಯೋದಲ್ಲಿ ಒಬ್ಬ ಪೊಲೀಸ್ ದೂರದಲ್ಲಿ ಕುಳಿತುಕೊಂಡು ಮುಂದೆ ಸಾಗುವುದನ್ನು ಕಾಣಬಹುದು. ನಂತರ ಕ್ಯಾಮೆರಾ ತೆರೆದ ರಸ್ತೆಯ ಕಡೆಗೆ ತಿರುಗುತ್ತದೆ.
ಅಲ್ಲಿ ಸ್ಫೋಟದ ನಂತರದ ಹೊಗೆಯಿಂದಾಗಿ ದೃಶ್ಯಗಳು ಸರಿಯಾಗಿ ಕಾಣಿಸುವುದಿಲ್ಲ. ಆದರೆ ವಿಡಿಯೋದಲ್ಲಿ 'ಉಡ್ ಗಯಾ.. ಪೂರಾ ಉಡ್ ಗಯಾ' (ಸ್ಪೋಟಗೊಂಡಿತು, ಎಲ್ಲವೂ ಸ್ಫೋಟಗೊಂಡಿತು) ಎಂಬ ಧ್ವನಿ ಗುಂಡೇಟಿನ ನಡುವೆ ಕೇಳುತ್ತದೆ. ಜೊತೆಗೆ ವಿಡಿಯೋದಲ್ಲಿ ಸ್ಫೋಟದ ಕಾರಣದಿಂದಾಗಿ ರಸ್ತೆ ಮೇಲೆ ವಿದ್ಯುತ್ ಕೇಬಲ್ ಕೂಡ ಜೋತಾಡುತ್ತಿರುವುದನ್ನು ಗಮನಿಸಬಹುದು. ಕ್ಯಾಮೆರವು ಒಂದು ಬಾರಿ ತಿರುಗಿದಾಗ ಸ್ಫೋಟದ ಸದ್ದು ಕೂಡ ಕೇಳಿಸುತ್ತದೆ.
ಛತ್ತೀಸ್‌ಗಢದ ದಾಂತೇವಾಡದಲ್ಲಿ ಬುಧವಾರ ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ 10 ಡಿಆರ್‌ಜಿ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ್ದಾರೆ. ಪೊಲೀಸರು ಬಾಡಿಗೆಗೆ ಪಡೆದಿದ್ದ ಮಿನಿ ಗೂಡ್ಸ್ ವ್ಯಾನ್ನ್ನು ನಕ್ಸಲರು ಸ್ಫೋಟಿಸಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ನಕ್ಸಲರು ಇರುವ ಬಗ್ಗೆ ಮಾಹಿತಿ ಪಡೆದ ಡಿಆರ್‌ಜಿಗಳು ಅರನ್‌ಪುರಕ್ಕೆ ತೆರಳಿದ್ದರು.
ನಕ್ಸಲ್ ಚಟುವಟಿಕೆ ವಿರುದ್ಧದ ಕಾರ್ಯಾಚರಣೆ ಮುಗಿಸಿ ರಾಜ್ಯ ಪೊಲೀಸ್‌ನ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ತಂಡ ವಾಹನದಲ್ಲಿ ಹಿಂತಿರುಗುತ್ತಿದ್ದಾಗ ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಮಿನಿ ಗೂಡ್ಸ್ ವಾಹನವನ್ನು ಐಇಡಿ ಬಳಸಿ ನಕ್ಸಲರು ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪ್ರದೇಶವು ರಾಜ್ಯದ ರಾಜಧಾನಿ ರಾಯ್‌ಪುರದಿಂದ ಸುಮಾರು 450 ಕಿ.ಮೀ ದೂರದಲ್ಲಿದೆ.
ಈ ದಾಳಿಯಲ್ಲಿ 10 ಡಿಆರ್‌ಜಿ ಪೊಲೀಸರು ಮತ್ತು ಒಬ್ಬ ಚಾಲಕ ಪ್ರಾಣ ಕಳೆದುಕೊಂಡಿದ್ದಾರೆ. ಅವರೆಲ್ಲರ ಮೃತದೇಹಗಳನ್ನು ಘಟನಾ ಸ್ಥಳದಿಂದ ಸ್ಥಳಾಂತರಿಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಇದ್ದು, ಕಾರ್ಯಾಚರಣೆ ನಡೆಯುತ್ತಿದೆ" ಎಂದು ಐಜಿ ಬಸ್ತಾರ್, ಪಿ ಸುಂದರರಾಜನ್ ಹೇಳಿದ್ದಾರೆ.
ಪ್ರಧಾನಿ ಮೋದಿ ಸಂತಾಪ: ನಕ್ಸಲರ ದಾಳಿ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ''ದಾಂತೇವಾಡದಲ್ಲಿ ಛತ್ತೀಸ್‌ಗಢ ಪೊಲೀಸರ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಈ ದಾಳಿಯಲ್ಲಿ ನಾವು ಕಳೆದುಕೊಂಡ ವೀರ ಪೊಲೀಸ್ ಸಿಬ್ಬಂದಿಗೆ ನನ್ನ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ತ್ಯಾಗ ಸದಾ ಸ್ಮರಣೀಯ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು'' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: 10 ಮಂದಿ ಪೊಲೀಸರು ಹುತಾತ್ಮ