ಹೈದರಾಬಾದ್: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಹೋಗಲಾಡಿಸಲು ಅದರ ವಿರುದ್ಧ ಯುದ್ಧ ಸಾರುವ ಲಸಿಕೆ ಎಂಬ ಅಸ್ತ್ರವನ್ನು ದೇಶದ ಎಲ್ಲಾ ಜನರಿಗೆ ನೀಡುತ್ತಿದೆಯಾದರೂ ಕೆಲವರೂ ಇನ್ನೂ ಕೂಡ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಇತ್ತೀಚೆಗಂತೂ ಸಾಮಾಜಿಕ ಜಾಲತಾಣದಲ್ಲಿ ಬಲವಂತವಾಗಿ ಲಸಿಕೆ ಹಾಕುವ ದೃಶ್ಯಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಆರೋಗ್ಯ ಕಾರ್ಯಕರ್ತರು ಎಷ್ಟೇ ಬೇಡಿಕೊಂಡರು ಗ್ರಾಮೀಣ ಭಾಗದ ಜನ ಸ್ವ ಇಚ್ಛೆಯಿಂದ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಮಹಬೂಬಾಬಾದ್ ಜಿಲ್ಲೆಯ ಪಡವಂಗರ ಮಂಡಲದ ಪೋಚಂಪಲ್ಲಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದಲ್ಲಿನ ವ್ಯಾಪ್ತಿಗೆ ಬರುವ ಗ್ರಾಮದಲ್ಲಿ ಲಸಿಕೆ ಹಾಕಿಸಿಕೊಳ್ಳುವಲ್ಲಿ ಇನ್ನೂ ನಿರ್ಲಕ್ಷ್ಯ ತೋರಿದ ಗ್ರಾಮಸ್ಥರ ಮೇಲೆ ಕಾರ್ಯಕರ್ತರು ಗಮನ ಹರಿಸಿದ್ದಾರೆ. ಪರಿಣಾಮ ಮನೆ ಮನೆಗೆ ತೆರಳಿ, ಯಾರ್ಯಾರಿಗೆ ಲಸಿಕೆ ಹಾಕಿಲ್ಲ ಎಂದು ಪತ್ತೆ ಹಚ್ಚಿ, ಹೆಸರು ನೋಂದಾಯಿಸಿ ಅವರಿಗೆ ಲಸಿಕೆ ಹಾಕಲು ಶತಪ್ರಯತ್ನ ನಡೆಸುತ್ತಿದ್ದಾರೆ.
ಈ ಅಭಿಯಾನದ ಭಾಗವಾಗಿ ಗ್ರಾಮದಲ್ಲಿನ ಒಬ್ಬ ವ್ಯಕ್ತಿ ಇನ್ನೂ ಲಸಿಕೆ ಹಾಕಿಸಿಕೊಳ್ಳದ ಕಾರಣ ಆತನಿಗೆ ಲಸಿಕೆ ಬಗ್ಗೆ ವಿವರಣೆ ನೀಡಿದ್ದಾರೆ. ಯಾರೂ ಏನೇ ಹೇಳಿದರೂ ಆತ ಮಾತ್ರ ತನಗೆ ಲಸಿಕೆ ಬೇಡ ಎಂದೇ ವಾದಿಸುತ್ತಿದ್ದ. ಎಷ್ಟೇ ಶ್ರಮಪಟ್ಟರೂ ಸಹ ಆರೋಗ್ಯ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಮಾತಿಗೆ ಬೆಲೆ ನೀಡಲಿಲ್ಲ.
ಇದರಿಂದ ಒಂದು ಪ್ಲಾನ್ ಮಾಡಿದ ಆರೋಗ್ಯ ಕಾರ್ಯರ್ತರು ಹಾಗೂ ಸ್ಥಳೀಯರು ಆತನನ್ನು ಎತ್ತಿ ಬೈಕ್ ಮೇಲೆ ಕೂರಿಸಿ ನೇರವಾಗಿ ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ಹಾಕಿದ್ದಾರೆ. ಈ ದೃಶ್ಯ ಈಗ ಎಲ್ಲೆಡೆ ವೈರಲ್ ಅಗಿದ್ದು, ಜನ ನಕ್ಕು ಆತನ ಸ್ಥಿತಿಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.