ತಿರುವನಂತಪುರಂ: ಕೇರಳ ರಾಜ್ಯ ಡೆಂಘಿ ಮತ್ತು ಇಲಿ ಜ್ವರದಿಂದ ತತ್ತರಿಸುತ್ತಿದೆ. ಈಗಾಗಲೇ 23 ಜನರು ಅಸುನೀಗಿದ್ದಾರೆ. ಆಸ್ಪತ್ರೆಗಳು ರೋಗಿಗಳಿಂದ ತುಂಬುತ್ತಿವೆ. ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಭಾನುವಾರ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಪತ್ತನತಿಟ್ಟುವಿನ ಕೊಡುಮಂಚಿರಾದ ಸುಜಾತ ಮೃತರು. ಜ್ವರದಿಂದ ಬಳಲುತ್ತಿದ್ದ ಇವರು ಕೊಟ್ಟುಂ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಯನುಸಾರ, ರಾಜ್ಯಾದ್ಯಂತ ವಿವಿಧ ಜ್ವರಗಳಿಂದ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಲ್ಲಿ ಡೆಂಘಿ ಮತ್ತು ಇಲಿ ಜ್ವರ ಪ್ರಮುಖವಾಗಿದೆ. ಬ್ಯಾಕ್ಟೀರಿಯಾ ಸೋಂಕು ಜನರಿಂದ ಜನರಿಗೆ ಹರಡುತ್ತಿದೆ. ಆರೋಗ್ಯ ಇಲಾಖೆ ಜನರಿಗೆ ಯಾವುದೇ ಸೋಂಕಿಗೆ ಮನೆ ಮದ್ದು ಬಳಸದಂತೆ, ಜ್ವರ ಕಾಣಿಸಿಕೊಂಡಾಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸೂಚನೆ ಕೊಟ್ಟಿದೆ.
ಜೂನ್ 1ರಿಂದ 13ರವರೆಗೆ 1,369 ಪ್ರಕರಣಗಳು ವರದಿಯಾಗಿವೆ. ಕಳೆದೊಂದು ವಾರದಲ್ಲಿ ರಾಜ್ಯದ್ಯಾಂತ 877 ಡೆಂಘಿ ಪ್ರಕರಣಗಳು ದಾಖಲಾಗಿವೆ. ಮಾನ್ಸೂನ್ಗೂ ಮುನ್ನ ಸ್ಥಳೀಯ ಆಡಳಿತವೂ ನೀರಿನ ಸಂಗ್ರಹಣೆ ಮೂಲಗಳನ್ನು ಶುಚಿಗೊಳಿಸುವಲ್ಲಿ ವಿಫಲವಾಗಿರುವುದು ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಇದು ಸೊಳ್ಳೆ ಮತ್ತು ಇಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ವಾಣಿಜ್ಯ ರಾಜಧಾನಿ ಕೊಚ್ಚಿ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಕಂಡು ಬರುತ್ತಿದೆ.
ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮ: ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, ಹೊಲ, ಗದ್ದೆ-ತೋಟದಲ್ಲಿ ಕೆಲಸ ಮಾಡುವವರು ಗ್ಲೌಸ್ ಬಳಕೆ ಮಾಡುವಂತೆ ತಿಳಿಸಿದ್ದಾರೆ. ಸೊಳ್ಳೆ, ಇಲಿ ಕಡಿತದಿಂತ ತಪ್ಪಿಸಿಕೊಳ್ಳಲು ಡೊಕ್ಸಿಸೈಕ್ಲೈನ್ ಮಾತ್ರೆಯನ್ನು ವಾರಕ್ಕೆ ಒಂದರಂತೆ ಸೇವಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಜ್ವರ ಪ್ರಕರಣಗಳು ಹೆಚ್ಚುವುದರೊಂದಿಗೆ ಸಾವಿನ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಗುರಿ ಇದೀಗ ಆರೋಗ್ಯ ಇಲಾಖೆ ಮೇಲೆ ಇದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಹೆಜ್ಜೆಗಳನ್ನು ಇಡಲಾಗುತ್ತಿದೆ. ಸೋಂಕು ನಿಯಂತ್ರಣಕ್ಕಾಗಿ ಆರೋಗ್ಯ ಸೇವೆ ನಿರ್ದೇಶಕರು ಜಿಲ್ಲಾ ವೈದ್ಯಕೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಹಲವು ಕ್ರಮಗಳಿಗೆ ಮುಂದಾಗಿದ್ದಾರೆ.
ಇಲಿ ಮತ್ತು ಡೆಂಘಿ ಹೊರತಾಗಿ ಜನರು ಅತಿಸಾರ ಮತ್ತು ಸಾಮಾನ್ಯ ಜ್ವರದಿಂದಲೂ ಬಳಲುತ್ತಿದ್ದಾರೆ. ದೀರ್ಘಕಾಲದ ರೋಗ ಹೊಂದಿರುವ ರೋಗಿಗಳಲ್ಲಿಇಂಥ ಜ್ವರದ ಪರಿಣಾಮ ಹೆಚ್ಚುತ್ತಿದ್ದು, ಇದು ಆರೋಗ್ಯ ಕಾರ್ಯಕರ್ತರ ಚಿಂತೆಗೆ ಕಾರಣವಾಗುತ್ತಿದೆ. ಎರ್ನಾಕುಲಂನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ: WHO ವಾರ್ನಿಂಗ್: ಹವಾಮಾನ ಬದಲಾವಣೆಯಿಂದ ಡೆಂಘೀ, ಚಿಕೂನ್‌ಗುನ್ಯಾ ಹೆಚ್ಚಳ!