ಆನಂದ್(ಗುಜರಾತ್): ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇ ಗುಜರಾತ್ನಲ್ಲಿ ಪೂಜಾ ಸ್ಥಳದ ವಿಚಾರಕ್ಕಾಗಿ ಶನಿವಾರ ರಾತ್ರಿ ಹಿಂಸಾಚಾರ ನಡೆದಿದೆ. ಜನರನ್ನು ಚದುರಿಸಲು ಪೊಲೀಸರು ರಬ್ಬರ್ ಬುಲೆಟ್, ಅಶ್ರುವಾಯು ಪ್ರಯೋಗಿಸಿದ್ದು, ಓರ್ವ ಪೊಲೀಸ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 14 ಗಲಭೆಕೋರರನ್ನು ಬಂಧಿಸಲಾಗಿದೆ. ವಿಶೇಷ ಅಂದ್ರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ಗೆ ಭೇಟಿ ನೀಡುವ ಮುನ್ನಾ ದಿನ ಈ ಗಲಾಟೆ ನಡೆದಿದೆ.
ಗುಜರಾತ್ನ ಆನಂದ್ ಜಿಲ್ಲೆಯ ಬೋರ್ಸಾದ್ ಪ್ರದೇಶದಲ್ಲಿನ ದೇವಸ್ಥಾನದ ಬಳಿಯ ಜಮೀನಿನ ಕುರಿತು ವಿವಾದವಿದೆ. ಶನಿವಾರ ರಾತ್ರಿ 9.30 ರ ವೇಳೆ ಒಂದು ಕೋಮಿನವರು ಆ ಜಾಗದಲ್ಲಿ ಇಟ್ಟಿಗೆಗಳನ್ನು ಸುರಿದಿದ್ದಾರೆ. ಈ ವೇಳೆ ಇನ್ನೊಂದು ಕೋಮಿನ ಗುಂಪು ಇದನ್ನು ಪ್ರಶ್ನಿಸಿದೆ. ಈ ವೇಳೆ ಎರಡು ಕೋಮಿನ ಗುಂಪುಗಳ ಮಧ್ಯೆ ವಾಗ್ವಾದ ಉಂಟಾಗಿದೆ.
ವಿಷಯ ತಿಳಿದ ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಎರಡೂ ಗುಂಪುಗಳ ಮಧ್ಯೆ ಮಾತುಕತೆ ನಡೆಸಿದ್ದಾರೆ. ಪೊಲೀಸರ ಮಧ್ಯಸ್ಥಿಕೆಗೂ ಬಗ್ಗದ ಜನರು ತೀವ್ರ ಕಿತ್ತಾಟ ನಡೆಸಿದ್ದಾರೆ. ಒಂದು ಕೋಮಿನ ಗುಂಪು ಹಿಂಸಾಚಾರಕ್ಕೆ ಇಳಿದಾಗ ತಕ್ಷಣವೇ ಎಚ್ಚೆತ್ತ ಪೊಲೀಸರು ಜನರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದಾರೆ. ಅಲ್ಲದೇ, ರಬ್ಬರ್ ಬುಲೆಟ್ಗಳನ್ನೂ ಹಾರಿಸಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
50 ಅಶ್ರುವಾಯು ಮತ್ತು 30 ರಬ್ಬರ್ ಬುಲೆಟ್‌ಗಳನ್ನು ಹಾರಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಲಭೆ ಸೃಷ್ಟಿಸಿದವರಲ್ಲಿ 14 ಜನರನ್ನು ಬಂಧಿಸಲಾಗಿದೆ. ಎಸ್‌ಆರ್‌ಪಿ ಸಿಬ್ಬಂದಿಯನ್ನೂ ಆ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಿತ್ ಶಾ ಭೇಟಿ: ಗಮನಾರ್ಹ ವಿಷಯವೆಂದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಆನಂದ್ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಜಿಲ್ಲೆಯ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನ 41 ನೇ ಘಟಿಕೋತ್ಸವದಲ್ಲಿ ಅವರು ಭಾಗವಹಿಸಿದ್ದಾರೆ.