ಗೋಲ್‌ಪಾರಾ(ಅಸ್ಸೋಂ): ಭಯೋತ್ಪಾದನೆ ಸಂಘಟನೆಗಳ ಜೊತೆ ನಂಟು ಹೊಂದಿದ್ದ ಅಸ್ಸೋಂನ ಮದರಸಾದ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಅಲ್ಲಿನ ಜನರೇ ನೆಲಸಮ ಮಾಡಿದ್ದಾರೆ. ಈ ಮೂಲಕ ಮದರಸಾವನ್ನು ಕೆಡವಲು ಮೀನಮೇಷ ಎಣಿಸುತ್ತಿದ್ದ ಜಿಲ್ಲಾಡಳಿತಕ್ಕೆ ತಕ್ಕ ಉತ್ತರ ನೀಡಿದ್ದಾರೆ.
ಅಸ್ಸೋಂನ ಗೋಲ್ಪುರ ಜಿಲ್ಲೆಯ ದರೋಗರ್ ಅಲ್ಗಾ ಚಾರ್ ಎಂಬಲ್ಲಿನ ಪಖಿಯುರಾ ಚಾರ್ ಮದರಸಾದಲ್ಲಿ ಜಿಹಾದ್ ಹೆಸರಿನಲ್ಲಿ ಕೆಲ ಮೂಲಭೂತವಾದಿಗಳು ಮುಸ್ಲಿಂ ಯುವಕರಿಗೆ ತರಬೇತಿ ನೀಡುತ್ತಿದ್ದರು ಎನ್ನಲಾಗಿದೆ. ಇದನ್ನು ಅಲ್ಲಿನ ಜಿಲ್ಲಾಡಳಿತ ಗುರುತಿಸಿ ಅಕ್ರಮ ಮದರಸಾವನ್ನು ಕೆಡವಲು ಪಟ್ಟಿ ಮಾಡಿತ್ತು. ಆದರೆ, ಅಧಿಕಾರಿಗಳು ವಿಳಂಬ ಮಾಡಿದ ಕಾರಣ ರೊಚ್ಚಿಗೆದ್ದ ಜನರು ಮದರಸಾವನ್ನು ನೆಲಸಮ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಅಕ್ರಮ ಮದರಸಾದಲ್ಲಿ ಇಬ್ಬರು ಬಾಂಗ್ಲಾದೇಶ ಮೂಲದ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು ಎನ್ನಲಾಗುತ್ತಿದೆ. ಮಕ್ಕಳಿಗೆ ಭಯೋತ್ಪಾದನೆ, ಮೂಲಭೂತವಾದದ ಬಗ್ಗೆ ಅವರು ಪಾಠ ಮಾಡುತ್ತಿದ್ದರು ಎಂಬ ಮಾಹಿತಿ ಇತ್ತು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮದರಸಾದ ಮೇಲೆ ಕ್ರಮಕ್ಕೆ ಮುಂದಾದಾಗ ಶಿಕ್ಷಕರಿಬ್ಬರು ತಲೆಮರೆಸಿಕೊಂಡಿದ್ದರು.
ಬಳಿಕ ಮದರಸಾದ ಇಮಾಮ್ ಆದ ಅಬ್ಬಾಸ್ ಅಲಿಯನ್ನು ಬಂಧಿಸಲಾಗಿತ್ತು. ಮದರಸಾದಲ್ಲಿ ತಪಾಸಣೆ ನಡೆಸಿದಾಗ ನಿಷೇಧಿತ ಸಂಘಟನೆಯಾದ ಅನ್ಸರ್ ಉಲ್ಲಾ ಬಾಂಗ್ಲಾ ತಂಡ ಮತ್ತು ಅಲ್ ಖೈದಾಗೆ ಸಂಬಂಧಿಸಿದ ದಾಖಲೆಗಳು ಇಲ್ಲಿ ಕಂಡುಬಂದಿದ್ದವು. ಪೊಲೀಸರು ಎಲ್ಲವನ್ನು ವಶಕ್ಕೆ ಪಡೆದು, ಅಕ್ರಮ ಮದರಸಾವನ್ನು ಕೆಡವಲು ಸೂಚಿಸಿದ್ದರು ಎನ್ನಲಾಗಿದೆ.
ಇನ್ನು ಮದರಸಾವನ್ನು ಕೆಡವಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್), ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಬಿಜೆಪಿ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಟೀಕಿಸಿದೆ.
ಈ ಹಿಂದೆಯೂ ಕೂಡ ಭಯೋತ್ಪಾದನೆ ಚಟುವಟಿಕೆ ನಡೆಸಿದ ಬೊಂಗೈಗಾಂವ್ ಜಿಲ್ಲೆಯ ಜೋಗಿಘೋಪಾ ಪ್ರದೇಶದ ಕಬೈತರಿಯಲ್ಲಿರುವ ಮರ್ಕಝುಲ್ ಮಆರಿಫ್-ಉ-ಕರಿಯಾನ ಮದರಸಾವನ್ನು ಜಿಲ್ಲಾಡಳಿತ ನೆಲಸಮಗೊಳಿಸಿತ್ತು.