ಚಂಡೀಗಢ : ಪಂಜಾಬ್ ವಿಜಿಲೆನ್ಸ್ ಬ್ಯೂರೋ ಎಐಜಿ ಆಶಿಶ್ ಕಪೂರ್ ಅವರನ್ನು ವಿವಿಧ ಚೆಕ್‌ಗಳ ಮೂಲಕ ಒಂದು ಕೋಟಿ ರೂ ಲಂಚ ಪಡೆದ ಪ್ರಕರಣದಲ್ಲಿ ಬಂಧಿಸಿದೆ. ಜೊತೆಗೆ ಗುಪ್ತಚರ ಇಲಾಖೆ ಡಿಎಸ್ಪಿ ಪವನ್ ಕುಮಾರ್ ಮತ್ತು ಎಎಸ್ಐ ಹರ್ಜಿಂದರ್ ಸಿಂಗ್ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.
ಪ್ರಕರಣ ಸಂಬಂಧ ಮಾಹಿತಿ ನೀಡಿದ ವಿಜಿಲೆನ್ಸ್ ಬ್ಯೂರೋ, ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7, 7 ಎ ಮತ್ತು ಐಪಿಸಿಯ 420, 120 ಬಿ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.
ಪ್ರಕರಣದ ಹಿನ್ನೆಲೆ: 2016 ರಲ್ಲಿ ಅಮೃತಸರದ ಸೆಂಟ್ರಲ್ ಜೈಲಿನಲ್ಲಿ ಕರ್ತವ್ಯದಲ್ಲಿದ್ದ ಆಶಿಶ್ ಕಪೂರ್ ಅವರಿಗೆ, ಕೆಲವು ಪ್ರಕರಣಗಳಲ್ಲಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಹರಿಯಾಣದ ಪೂನಂ ರಾಜನ್ ಎಂಬ ಮಹಿಳೆಯ ಪರಿಚಯವಾಗಿತ್ತು. ಪೂನಂ ರಾಜನ್ ತನ್ನ ತಾಯಿ ಪ್ರೇಮ್ ಲತಾ, ಸಹೋದರ ಕುಲದೀಪ್ ಸಿಂಗ್ ಮತ್ತು ಅತ್ತಿಗೆ ಪ್ರೀತಿಯೊಂದಿಗೆ ಪೊಲೀಸ್ ಠಾಣೆ ಜಿರಾಕ್‌ಪುರದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಪೊಲೀಸ್ ರಿಮಾಂಡ್‌ನಲ್ಲಿದ್ದಾಗ, ಆಶಿಶ್ ಕಪೂರ್ ಪೊಲೀಸ್ ಠಾಣೆಗೆ ತೆರಳಿ ಪೂನಂ ರಾಜನ್ ಅವರ ತಾಯಿ ಪ್ರೇಮ್ ಲತಾ ಅವರಿಗೆ ಜಾಮೀನು ಪಡೆಯಲು ಮತ್ತು ನ್ಯಾಯಾಲಯದಿಂದ ಖುಲಾಸೆಗೊಳಿಸಲು ಸಹಾಯ ಮಾಡುವಂತೆ ಹೇಳಿದ್ದರು.
ಬಳಿಕ ಆಶಿಶ್ ಕಪೂರ್, ಪವನ್ ಕುಮಾರ್ ಮತ್ತು ಎಎಸ್ಐ ಹರ್ಜಿಂದರ್ ಸಿಂಗ್ ಜೊತೆಗೂಡಿ ಪೂನಂ ರಾಜನ್ ಅವರ ಅತ್ತಿಗೆ ಪ್ರೀತಿಯನ್ನು ನಿರಪರಾಧಿ ಎಂದು ಘೋಷಿಸಿದ್ದರು. ಇದಕ್ಕೆ ಪ್ರತಿಯಾಗಿ ಇವರು ಒಂದು ಕೋಟಿ ಲಂಚ ಪಡೆದಿದ್ದಾರೆ. ಈ ಹಿನ್ನಲೆ ಎಐಜಿ ಆಶಿಶ್ ಕಪೂರ್ ಅವರನ್ನು ಬಂಧಿಸಲಾಗಿದೆ ಎಂದು ವಿಜಲೆನ್ಸ್ ಬ್ಯೂರೋ ಹೇಳಿದೆ.
ಇದನ್ನೂ ಓದಿ : ಆನ್‌ಲೈನ್ ರಮ್ಮಿಗೆ ವ್ಯಸನಿಯಾಗಿದ್ದ ಯುವಕ ಆತ್ಮಹತ್ಯೆ