ನವದೆಹಲಿ/ಗಾಜಿಯಾಬಾದ್: ಶಾಲಾ ಬಸ್ ಅಪಘಾತದಲ್ಲಿ ಮಗನ ಕಳೆದುಕೊಂಡು ರೋಧಿಸುತ್ತಿದ್ದ ತಾಯಿಯೋರ್ವಳಿಗೆ ಮಹಿಳಾ ಅಧಿಕಾರಿ ಸಾಂತ್ವನದ ಬದಲು ಗದರಿಸಿರುವ ಘಟನೆ ನವದೆಹಲಿಯ ಮೋದಿನಗರ್ದಲ್ಲಿ ನಡೆದಿದೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಧಿಕಾರಿ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಅನುರಾಗ್ ಭಾರದ್ವಾಜ್ ಎಂಬ 10 ವರ್ಷದ ವಿದ್ಯಾರ್ಥಿ ಬುಧವಾರ ಬಸ್ ಕಿಟಕಿಯ ಬಳಿ ಒರಗಿ ಕುಳಿತುಕೊಂಡಿದ್ದನು. ಈ ವೇಳೆ ಬಸ್ ಚಾಲಕ ಅಡ್ಡಾದಿಡ್ಡಿ ಬಸ್ ಚಲಾಯಿಸಿದ್ದರಿಂದ ವಿದ್ಯಾರ್ಥಿ ತಲೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಬಸ್ ಚಾಲಕನ ಬಂಧನ ಮಾಡಲಾಗಿದೆ. ಆದರೆ, ಶಾಲಾ ಆಡಳಿತ ಮಂಡಳಿ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಬಾಲಕನ ಪೋಷಕರು ಮೋದಿ ನಗರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮುಂದೆ ಇಂದು ಪ್ರತಿಭಟನೆ ನಡೆಸುತ್ತಿದ್ದರು.
ಇದನ್ನೂ ಓದಿ: 12 ವರ್ಷದ ಬಾಲಕನಿಂದ ಅತ್ಯಾಚಾರ; ಮಗುವಿಗೆ ಜನ್ಮ ನೀಡಿದ 17 ವರ್ಷದ ಬಾಲಕಿ
ಪ್ರತಿಭಟನಾನಿರತರ ಸ್ಥಳಕ್ಕಾಗಮಿಸಿದ ಮೋದಿ ನಗರ ಎಸ್ಡಿಎಂ ಶುಭಾಂಗಿ ಶುಕ್ಲಾ, ಕಣ್ಣೀರು ಹಾಕುತ್ತಿದ್ದ ಬಾಲಕನ ತಾಯಿಗೆ ಸಾಂತ್ವನ ಹೇಳುವ ಬದಲಾಗಿ, ಅವರನ್ನ ಗದರಿಸಿದ್ದು, ಪ್ರತಿಭಟನಾನಿರತರೊಂದಿಗೆ ವಾಗ್ವಾದ ನಡೆಸಿದ್ದಾರೆ. ನಿಮಗೆ ನಾನು ಹೇಳಿದ್ದು ಯಾಕೆ ಅರ್ಥವಾಗ್ತಿಲ್ಲ. ಬಾಯಿ ಮುಚ್ಚಿಕೊಳ್ಳಿ. ಎಷ್ಟು ಸಲ ನಿಮಗೆ ನಾನು ಹೇಳಬೇಕು ಎಂದು ಗದರಿಸಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.