ಹೈದರಾಬಾದ್: ಹಿಂದೂ ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಕಾನೂನು ರೂಪಿಸುವಂತೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕೇಂದ್ರಕ್ಕೆ ಮನವಿ ಮಾಡಿದೆ. ಹಾಗೆ ಮತಾಂತರ ವಿರೋಧಿ ಕಾನೂನಿಗೆ ಒತ್ತಾಯಿಸಿದೆ.
ಹಿಂದೂ ದೇವಾಲಯಗಳನ್ನು ಹಿಂದೂ ಸಮಾಜಕ್ಕೆ ಹಸ್ತಾಂತರಿಸುವಂತೆ ಸಂಘಟನೆಯು ಎಲ್ಲಾ ರಾಜ್ಯ ಸರ್ಕಾರಗಳಿಗೆ ಕರೆ ನೀಡಿದೆ ಮತ್ತು ಈ ಸಂಬಂಧ ಕಾನೂನು ತರಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ವಿಎಚ್‌ಪಿಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಾಮೂಹಿಕ ಮತಾಂತರಗಳು ನಡೆಯುತ್ತಿವೆ ಎಂದು ಅವರು ಈ ವೇಳೆ ಕಳವಳ ವ್ಯಕ್ತಪಡಿಸಿದರು. ಈ ಮತಾಂತರಗಳು ಆಮಿಷ, ವಂಚನೆ ಮತ್ತು ಭಯದಿಂದ ಪ್ರೇರೇಪಿಸಲ್ಪಟ್ಟಿವೆ. ವಿಎಚ್‌ಪಿ ಅಂತಹ ಮತಾಂತರಗಳನ್ನು ವಿರೋಧಿಸುತ್ತದೆ ಮತ್ತು ಮತಾಂತರಗೊಂಡ ಸಹೋದರ ಸಹೋದರಿಯರನ್ನು ಮತ್ತೆ ಹಿಂದೂ ಧರ್ಮದ ಮಡಿಲಿಗೆ ತರಲು ತನ್ನ ಅಭಿಯಾನವನ್ನು ತೀವ್ರಗೊಳಿಸುತ್ತದೆ ಎಂದು ಹೇಳಿದರು.
ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಂತೆ ತೆಲಂಗಾಣ ಸರ್ಕಾರವು ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಬೇಕು. ಈ ಸಂಬಂಧ ನಾವು ಧಾರ್ಮಿಕ ಮತಾಂತರದ ವಿರುದ್ಧ ಕಾನೂನನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ತೆಲಂಗಾಣ ರಾಜ್ಯದಲ್ಲಿ ಗೋಹತ್ಯೆಯ ಘಟನೆಗಳು ಹೆಚ್ಚುತ್ತಿರುವ ಕಾರಣ ಗೋವುಗಳು ಮತ್ತು ಅದರ ಸಂತತಿಯನ್ನು ರಕ್ಷಿಸಲು ತೆಲಂಗಾಣ ಸರ್ಕಾರವು ಕಾನೂನುಗಳನ್ನು ತರಬೇಕೆಂದು ಇದೇ ವೇಳೆ ವಿಎಚ್‌ಪಿ ನಾಯಕ ಒತ್ತಾಯಿಸಿದ್ದಾರೆ.