ಚೆನ್ನೈ(ತಮಿಳುನಾಡು): ಪಲ್ಲವರಂನಲ್ಲಿರುವ ವಿಇಎಲ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ 12 ನೇ ಘಟಿಕೋತ್ಸವ ಸಮಾರಂಭವು ಶುಕ್ರವಾರ ಸಂಸ್ಥೆಯ ಸಂಸ್ಥಾಪಕ ಮತ್ತು ಕುಲಪತಿ ಇಶಾರಿ ಕೆ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾರಂಭದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ಈ ಶೈಕ್ಷಣಿಕ ವರ್ಷದಲ್ಲಿ 68 ಚಿನ್ನದ ಪದಕ, 48 ಬೆಳ್ಳಿ ಪದಕ ಮತ್ತು 43 ಕಂಚಿನ ಪದಕಗಳನ್ನು ನೀಡಲಾಗಿದೆ. ಅಲ್ಲದೇ, 4,829 ವಿದ್ಯಾರ್ಥಿಗಳಿಗೆ 4,011 ಪದವಿ, 583 ಸ್ನಾತಕ ಪದವಿ, 87 ಸ್ನಾತಕೋತ್ತರ ಪದವಿ ಮತ್ತು 148 ಡಾಕ್ಟರೇಟ್ ಪದವಿಗಳನ್ನು ನೀಡಲಾಯಿತು.
ರಾಜ್ಯಪಾಲ ಆರ್.ಎನ್.ರವಿ ಮಾತನಾಡಿ, ಪದವಿ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಅವರನ್ನು ಪ್ರೋತ್ಸಾಹಿಸಿದ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆಗಳು. ನಿಮ್ಮ ಕನಸುಗಳನ್ನು ಸಾಧಿಸಲು ನೀವು ಶ್ರಮಿಸಬೇಕು. ದೇಶಕ್ಕೆ ಸೇವೆ ನಿಮ್ಮಿಂದ ಮೊದಲು ಪ್ರಾರಂಭವಾಗುತ್ತದೆ. ವೈಯಕ್ತಿಕ ಮಾನವ ಸಾಧನೆಗಳು ಒಟ್ಟಾಗಿ ನಮ್ಮ ರಾಷ್ಟ್ರವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿ ಸಾಧನೆ ಮಾಡಿದರೆ ಇಡೀ ಭಾರತವೇ ಸಾಧನೆ ಮಾಡಿದಂತೆ ಎಂದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಶ್ ರೈನಾ, "ಚೆಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ನನ್ನ ಶುಭಾಶಯಗಳು. ನಾನು ಯಾವಾಗಲೂ ಚೆನ್ನೈಗೆ ಬರಲು ಸಂತೋಷಪಡುತ್ತೇನೆ" ಎಂದು ಹೇಳಿದರು.
ನಿರ್ದೇಶಕ ಶಂಕರ್ ಮಾತನಾಡಿ, "ಈ ಡಾಕ್ಟರೇಟ್ ನನಗೆ ಹೆಚ್ಚಿನ ಪ್ರೇರಣೆ ನೀಡುತ್ತದೆ. ಸಿನಿಮಾದಲ್ಲಿ ಹೊಸ ಕಲೆ ಮತ್ತು ತಂತ್ರಜ್ಞಾನಗಳನ್ನು ತರಲು ಇದು ಸ್ಫೂರ್ತಿ ಮತ್ತು ಉತ್ಸಾಹವೂ ಹೌದು" ಎಂದರು.
ಸಮಾರಂಭದಲ್ಲಿ ಬಾಬಾ ಅಣು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊಫೆಸರ್ ಅಜಿತ್‌ಕುಮಾರ್ ಮೊಹಂತಿ, ಚಲನಚಿತ್ರ ನಿರ್ದೇಶಕ ಶಂಕರ್, ಕ್ರಿಕೆಟಿಗ ಸುರೇಶ್ ರೈನಾ, ರಾಡಿಸನ್ ಬ್ಲೂ ಗ್ರೂಪ್ ಅಧ್ಯಕ್ಷ ವಿಕ್ರಮ್ ಅಗರ್ವಾಲ್ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: Udhampur road accident: ರಸ್ತೆಯಿಂದ ಸ್ಕಿಡ್ ಆಗಿ ಕಣಿವೆಗೆ ಬಿದ್ದ ಮಿನಿ ಬಸ್.. 12 ವಿದ್ಯಾರ್ಥಿಗಳು ಸೇರಿ 15 ಜನರಿಗೆ ಗಾಯ