ಚೆನ್ನೈ: ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿ ನಿವಾಸಿ ದಿನಕರನ್ (21) ಎಂಬ ಯುವಕ ಏಪ್ರಿಲ್ 29ರಂದು ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದನು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಆತನ ಮೆದುಳು ನಿಷ್ಕ್ರಿಯಗೊಂಡ ಕಾರಣ ಆತನ ಅಂಗಾಗಗಳನ್ನು ದಾನ ಮಾಡಲಾಗಿದೆ. ಹೃದಯವನ್ನು ಚೆನ್ನೈನ ಅಪೋಲೋ ಆಸ್ಪತ್ರೆಯ ರೋಗಿಗೆ ಕಸಿ ಮಾಡಲಾಗಿದೆ. ಆತನ ಹೃದಯವನ್ನು ರಸ್ತೆಯ ಮೂಲಕವೇ ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತು.
ಅಪಘಾತಗೊಂಡ ಯುವಕನನ್ನು ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾದ ಗಾಯಗಳಿಂದಾಗಿ ಯುವಕನ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ನಿನ್ನೆ (ಮೇ 1) ವೈದ್ಯರು ಘೋಷಿಸಿದ ಕಾರಣ ಹೆತ್ತವರು ಆತನ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು. ಹಾಗಾಗಿ, ಹೃದಯ, ಯಕೃತ್ತು, ಮೂತ್ರಪಿಂಡಗಳನ್ನು ದಾನ ಮಾಡಲಾಯಿತು.
ನಿನ್ನೆ ಮಧ್ಯಾಹ್ನ 3 ಗಂಟೆಗೆ ವೆಲ್ಲೂರ್ ಸಿಎಂಸಿ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಹೊರಟು ರಸ್ತೆ ಮಾರ್ಗದ ಮೂಲಕವೇ 4.30ಕ್ಕೆ ಅಪೋಲೋ ಆಸ್ಪತ್ರೆಯನ್ನು ತಲುಪಿದೆ. ತಕ್ಷಣವೇ ಹೃದಯ ಕಸಿ ಚಿಕಿತ್ಸೆ ನೆರವೇರಿಸಲಾಗಿದೆ. 21 ವರ್ಷದ ಯುವಕನ ಕಿಡ್ನಿ, ಲಿವರ್ ಅನ್ನು ಸಿಎಂಸಿ ಆಸ್ಪತ್ರೆಗೆ ನೀಡಲಾಗಿದೆ. ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಸಹಾಯದಿಂದ ಅಂಗಗಳ ಸುಗಮ ಮತ್ತು ವೇಗದ ಸಾಗಣೆಗಾಗಿ ಗ್ರೀನ್ ಕಾರಿಡಾರ್ ಅನ್ನು ರಚಿಸಲಾಗಿತ್ತು.
ಇದನ್ನೂ ಓದಿ: ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 10 ವರ್ಷದ ಬಾಲಕನಿಗೆ ಯಶಸ್ವಿ ಲಿವರ್ ಕಸಿ