ತಿರುವನಂತಪುರಂ(ಕೇರಳ): ಕೇರಳದಲ್ಲಿ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯಗಳ ಕುಲಪತಿಗಳ ಮಧ್ಯೆ ಕಿತ್ತಾಟ ಜೋರಾಗಿದೆ. ತಮ್ಮ ರಾಜೀನಾಮೆಯನ್ನು ರಾಜ್ಯಪಾಲರು ಕೇಳಿದ್ದರ ವಿರುದ್ಧ 9 ವಿವಿಗಳ ಕುಲಪತಿಗಳು ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಪರಿಗಣಿಸಿರುವ ಕೋರ್ಟ್ ಸಂಜೆ 4 ಗಂಟೆಗೆ ತುರ್ತು ವಿಚಾರಣೆ ನಡೆಸಲು ಒಪ್ಪಿದೆ.
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿ ನೇಮಕವಾಗಿದ್ದ ಕೇರಳದ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ(ವಿಸಿ) ನೇಮಕವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಇದನ್ನೇ ಮುಂದು ಮಾಡಿರುವ ರಾಜ್ಯಪಾಲ ಆರಿಫ್ ಮೊಹಮದ್ ಖಾನ್ ವಿರುದ್ಧ ರಾಜ್ಯದ ಎಲ್ಲ 9 ವಿವಿಗಳ ಕುಲಪತಿಗಳು ಸೋಮವಾರ 11.30 ರೊಳಗೆ ರಾಜೀನಾಮೆ ಪತ್ರವನ್ನು ರಾಜಭವನಕ್ಕೆ ಕಳುಹಿಸಬೇಕು ಎಂದು ಸೂಚಿಸಿದ್ದರು.
ಇದನ್ನು ವಿರೋಧಿಸಿರುವ ವಿವಿಗಳ ಕುಲಪತಿಗಳು ರಾಜ್ಯಪಾಲರ ಸೂಚನೆಯ ವಿರುದ್ಧ ಕೇರಳ ಹೈಕೋರ್ಟ್ಗೆ ದೂರು ನೀಡಿದ್ದಾರೆ. ಅಲ್ಲದೇ, ಈವರೆಗೂ ಯಾರೊಬ್ಬರೂ ರಾಜೀನಾಮೆ ಸಲ್ಲಿಸಿಲ್ಲ. ಅಲ್ಲದೇ, ರಾಜೀನಾಮೆ ನೀಡುವುದಿಲ್ಲ ಎಂದು ರಾಜ್ಯಪಾಲರಿಗೂ ಲಿಖಿತವಾಗಿ ಉತ್ತರ ನೀಡಿದ್ದಾರೆ.
ರಜಾ ದಿನವಾದರೂ ವಿಚಾರಣೆ: ರಾಜ್ಯದ 9 ವಿವಿಗಳ ವಿಸಿಗಳು ಸಲ್ಲಿಸಿದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಕೋರ್ಟ್ ಸಮ್ಮತಿಸಿ ನೀಡಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಇಂದು ರಜಾ ದಿನವಾದರೂ ಸಂಜೆ 4 ಗಂಟೆಗೆ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನೇತೃತ್ವದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
ಈ ವಿವಿ ವಿಸಿಗಳ ರಾಜೀನಾಮೆ ಕೇಳಿದ ಗವರ್ನರ್: ಕೇರಳ ವಿಶ್ವವಿದ್ಯಾಲಯ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ, ಕಣ್ಣೂರು ವಿಶ್ವವಿದ್ಯಾಲಯ, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ, ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ, ಕ್ಯಾಲಿಕಟ್ ವಿಶ್ವವಿದ್ಯಾಲಯ ಮತ್ತು ತುಂಚತ್ ಎಝುತಾಚನ್ ಮಲಯಾಳಂ ವಿಶ್ವವಿದ್ಯಾಲಯದ ವಿಸಿಗಳು ರಾಜೀನಾಮೆ ನೀಡಬೇಕು ಎಂದು ರಾಜ್ಯಪಾಲ ಖಾನ್ ಕೋರಿದ್ದಾರೆ.
ಓದಿ: ಉಪಕುಲಪತಿಗಳ ರಾಜೀನಾಮೆ ಕೇಳುವ ಅಧಿಕಾರ ರಾಜ್ಯಪಾಲರಿಗಿಲ್ಲ: ಕೇರಳ ಸಿಎಂ ವಾಗ್ದಾಳಿ