ವಾರಾಣಸಿ: ಹಿಂದುಗಳ ಮಂದಿರವೋ, ಮಸೀದಿಯೋ ಎಂಬ ಜಿಜ್ಞಾಸೆ ಮೂಡಿಸಿರುವ ಇಲ್ಲಿನ ಜ್ಞಾನವಾಪಿಯ ಸರ್ವೇ ಕಾರ್ಯ ನಡೆಯುತ್ತಿರುವ ಮಧ್ಯೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೀಡಲಾಗಿದ್ದ ಗಡುವು ಇಂದಿಗೆ (ಶನಿವಾರ) ಮುಗಿದಿದೆ. ಜ್ಞಾನವಾಪಿಯನ್ನು ಇನ್ನಷ್ಟು ಕೂಲಂಕಷವಾಗಿ ಅಧ್ಯಯನ ಮಾಡಲು ಹೆಚ್ಚುವರಿ 8 ವಾರಗಳ ಕಾಲಾವಕಾಶ ನೀಡಬೇಕು ಎಂದು ಎಎಸ್‌ಐ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ಸೆಪ್ಟೆಂಬರ್ 8 ರಂದು ನಡೆಯಲಿದೆ. ಅಲ್ಲಿಯವರೆಗೂ ಸರ್ವೇ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.
ಮಸೀದಿಯಾಗಿರುವ ಜ್ಞಾನವಾಪಿಯಲ್ಲಿ ಶಿವಲಿಂಗ ಪತ್ತೆಯಾದ ಬಳಿಕ ಹಿಂದೆ ಇದು ದೇವಸ್ಥಾನವಾಗಿತ್ತು. ಹೀಗಾಗಿ ಇದನ್ನು ಸರ್ವೇ ಮಾಡಬೇಕು ಎಂದು ಕೋರಿ ಸರ್ವೇಕ್ಷಣಾ ಇಲಾಖೆ ಅರ್ಜಿ ಸಲ್ಲಿಸಿತ್ತು. ಅದರಂತೆ ಎಎಸ್‌ಐ ತಂಡಕ್ಕೆ ವಾರಣಾಸಿ ಜಿಲ್ಲಾ ನ್ಯಾಯಾಲಯವು ಸೆಪ್ಟೆಂಬರ್ 2 ರ ವರೆಗೆ ಗಡುವು ನೀಡಿತ್ತು. ಇಂದು ಅದರ ಅವಧಿ ಮುಗಿದಿದೆ.
ಈ ಬಗ್ಗೆ ಕೋರ್ಟ್ಗೆ ಮಾಹಿತಿ ನೀಡಿದ ಸರ್ಕಾರದ ಪರ ವಕೀಲ ಅಮಿತ್ ಶ್ರೀವಾಸ್ತವ್, ಆಗಸ್ಟ್ 4ರಂದು ಸರ್ವೇ ಕಾರ್ಯದ ಮೊದಲ ವರದಿ ಸಲ್ಲಿಸಲು ಕೋರ್ಟ್ ಕಾಲಾವಕಾಶ ನೀಡಿತ್ತು. ಆದರೆ, ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಈ ಕಾರಣದಿಂದಾಗಿ ಸರ್ವೇ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಇದಾದ ಬಳಿಕ ವಿಶೇಷ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು. ಅದರ ಗಡುವು ಇಂದು ಅಂದರೆ ಸೆಪ್ಟೆಂಬರ್ 2ಕ್ಕೆ ಕೊನೆಗೊಳ್ಳುತ್ತಿದೆ. ಸದ್ಯ ಸರ್ವೆ ಕಾರ್ಯ ನಡೆಯುತ್ತಿದ್ದು, ಇನ್ನೂ ಹಲವೆಡೆ ಸಮೀಕ್ಷೆ ಬಾಕಿ ಉಳಿದಿದೆ. ಈ ಕಾರಣಕ್ಕಾಗಿ ಎಎಸ್‌ಐ ತಂಡವು ಮತ್ತಷ್ಟು ಸಮೀಕ್ಷೆಗಾಗಿ 8 ವಾರಗಳ ಹೆಚ್ಚುವರಿ ಸಮಯವನ್ನು ಕೇಳಿ, ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆ. ನ್ಯಾಯಾಲಯವು ಸೆಪ್ಟೆಂಬರ್ 8 ರಂದು ವಿಚಾರಣೆಯ ದಿನಾಂಕವನ್ನು ನೀಡಿದೆ.
ಆಗಸ್ಟ್ 4 ರಿಂದ ಸಮೀಕ್ಷೆ : ಜುಲೈ 21 ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಆವರಣದ ಸಮೀಕ್ಷೆಗೆ ಆದೇಶಿಸಿತ್ತು. ಜುಲೈ 24ರಂದು ಸಮೀಕ್ಷೆ ಪ್ರಕ್ರಿಯೆ ಆರಂಭವಾಗಿತ್ತು. ಅದೇ ದಿನ, ಮುಸ್ಲಿಂ ಪಕ್ಷದವರು ಇದನ್ನು ವಿರೋಧಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ತುರ್ತು ವಿಚಾರಣೆ ನಡೆಸಿದ್ದ ಕೋರ್ಟ್, ಸಮೀಕ್ಷೆಗೆ ತಡೆ ನೀಡಿ ಪ್ರಕರಣದ ವಿಚಾರಣೆ ಮುಂದುವರಿಸಲು ಸ್ಥಳೀಯ ಕೋರ್ಟ್ಗೆ ಸೂಚಿಸಿತ್ತು.
ಹೈಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆದು ವಾರಾಣಸಿ ಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿಯಲಾಗಿತ್ತು. ಜ್ಞಾನವಾಪಿ ಮಸೀದಿ ಸಮೀಕ್ಷೆ ಕೈಗೊಳ್ಳಲು ಎಎಸ್‌ಐಗೆ ಅನುಮತಿಸಲಾಗಿತ್ತು. ಬಳಿಕ ಆಗಸ್ಟ್ 4ರಿಂದ ಸಮೀಕ್ಷೆ ಪ್ರಕ್ರಿಯೆ ಆರಂಭವಾಗಿತ್ತು. ನಾಲ್ಕು ವಾರಗಳಲ್ಲಿ ಸರ್ವೇ ಪೂರ್ಣಗೊಳಿಸಿ, ಸೆಪ್ಟೆಂಬರ್ 2ರೊಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ಇನ್ನೂ ಹಲವೆಡೆ ಸರ್ವೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದರಿಂದಾಗಿ ಎಎಸ್‌ಐ ತಂಡ ಹೆಚ್ಚುವರಿ ಸಮಯ ಕೋರಿದ್ದು, ಅಲ್ಲಿಯವರೆಗೆ ಸಮೀಕ್ಷೆ ಮುಂದುವರಿಯಲಿದೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಮುಂದುವರಿದ ಸರ್ವೆ ಕಾರ್ಯ..!