ವಾರಾಣಸಿ: ಬನಾರಸ್‌ನ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉಡಾಯಿಸುವುದಾಗಿ ವ್ಯಕ್ತಿಯೊಬ್ಬ ಬಾಂಬ್ ಬೆದರಿಕೆ ಹಾಕಿದ್ದಾನೆ. ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಮತ್ತು ಸ್ಥಳೀಯ ಗುಪ್ತಚರ ಇಲಾಖೆ ಬಿಗಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಭದೋಹಿ ನಿವಾಸಿಯ ಯುವಕನೊಬ್ಬ ಬಾಂಬ್ ಬೆದರಿಕೆ ಹಾಕಿರುವುದಾಗಿ ಪ್ರಕರಣದ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫುಲ್‌ಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಆತನನ್ನು ಬಂಧಿಸಿರುವ ತನಿಖಾಧಿಕಾರಿಗಳು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಮೊಬೈಲ್ ಸಂಖ್ಯೆಗೆ ಕರೆ: ''ಶುಕ್ರವಾರ ವಿಮಾನ ನಿಲ್ದಾಣದ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಆ ವ್ಯಕ್ತಿ, ವಿಮಾನ ನಿಲ್ದಾಣವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಹೇಳಿದ್ದ. ಅಲ್ಲದೇ ಶನಿವಾರ ಸಂಜೆಯ ವೇಳೆಗೆ ಈ ವಿಮಾನ ನಿಲ್ದಾಣದ ನಕ್ಷೆ ಬದಲಾಗಲಿದೆ ಎಂದು ಯುವಕ ಫೋನ್‌ನಲ್ಲಿ ಬೆದರಿಕೆ ಹಾಕಿದ್ದ. ಇದರಿಂದ ಕಾರ್ಯಪ್ರವೃತ್ತರಾದ ವಿಮಾನ ನಿಲ್ದಾಣ ಪ್ರಾಧಿಕಾರ ತಕ್ಷಣ ಠಾಣೆಗೆ ಮಾಹಿತಿ ನೀಡಿತ್ತು. ಗುಪ್ತಚರ ಸಂಸ್ಥೆಗಳು ತಕ್ಷಣ ಎಚ್ಚೆತ್ತುಕೊಂಡು ಭದ್ರತೆ ಹೆಚ್ಚಿಸಿದ್ದವು. ಈ ಬಗ್ಗೆ ಮಾಹಿತಿ ಪಡೆದ ತಜ್ಞರ ತಂಡ, ಕಣ್ಗಾವಲು ಮೂಲಕ ಫೋನ್ ನಂಬರ್ ಪತ್ತೆ ಹಚ್ಚಲು ಆರಂಭಿಸಿತು. ಬಳಿಕ ಭದೋಹಿ ಎಂಬ ಪ್ರದೇಶದಿಂದ ಈ ಕರೆ ಬಂದಿರುವುದು ತನಿಖೆ ವೇಳೆ ಗೊತ್ತಾಗಿದೆ. ಕರೆ ಮಾಡಿದ ವ್ಯಕ್ತಿ ತನ್ನ ಹೆಸರನ್ನು ಅಶೋಕ್ ಎಂದು ಹೇಳಿಕೊಂಡಿದ್ದಾನೆ. ವ್ಯಕ್ತಿ ಇದೇ ರೀತಿ ಕರೆಗಳನ್ನು ಮಾಡಿ ಹಲವರಿಗೆ ಕಿರುಕುಳ ನೀಡುತ್ತಿದ್ದ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಸದ್ಯ ತನಿಖೆ ನಡೆಸಲಾಗುತ್ತಿದೆ'' ಎಂದು ಫುಲ್‌ಪುರ ಪೊಲೀಸ್ ಠಾಣೆಯ ಪ್ರಭಾರಿ ದೀಪಕ್ ರನೌತ್ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಅಶೋಕನ ತಂದೆ ಕ್ಷಮಿಸುವಂತೆ ಬೇಡಿಕೊಂಡರು. ಆದರೂ ಕೇಳದ ಅಧಿಕಾರಿಗಳು, ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಬೆದರಿಕೆ ಕರೆಗಳು ಬರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಮಾರ್ಚ್‌ನಲ್ಲಿ ಹೋಳಿಹಬ್ಬದ ವೇಳೆಯೂ ವಿಮಾನ ನಿಲ್ದಾಣಕ್ಕೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಲಾಗಿತ್ತು. ವಾರಾಣಸಿ, ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರವಾಗಿದೆ.
ಇದನ್ನೂ ಓದಿ: ದೆಹಲಿ - ಪುಣೆ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ: ಭದ್ರತಾ ಸಂಸ್ಥೆಗಳಿಂದ ತಪಾಸಣೆ ಕಾರ್ಯ ಚುರುಕು..