ಪ್ರತಿವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನ ಅಥವಾ ಸೇಂಟ್ ವ್ಯಾಲೆಂಟೈನ್ ಡೇ ಆಚರಿಸಲಾಗುತ್ತದೆ. ಪ್ರೀತಿಯ ಸಂದೇಶಗಳೊಂದಿಗೆ ಕಾರ್ಡ್, ಹೂ ಅಥವಾ ಚಾಕೊಲೇಟ್‌ಗಳನ್ನು ಕಳುಹಿಸುವ ಮೂಲಕ ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ದಿನ ಇದಾಗಿದೆ.
ಇಂದು ಪ್ರೇಮಿಗಳ ದಿನ. ಈ ದಿನವನ್ನು ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ವ್ಯಾಲೆಂಟೈನ್ ಡೇ ಪಾಶ್ಚಾತ್ಯ ದೇಶದ ಆಚರಣೆಯಾಗಿದ್ದರೂ ಇಂದು ಭಾರತದ ಮೂಲೆ ಮೂಲೆಯಲ್ಲೂ ಆಚರಿಸಲಾಗುತ್ತದೆ. ಇದುವೇ ಪ್ರೀತಿಯ ಶಕ್ತಿ ಎಂದರೆ ತಪ್ಪಾಗಲಾರದು.
ಪ್ರೇಮಿಗಳ ದಿನ ಎಂದರೇನು?
ವಸಂತ ಕಾಲದ ಪ್ರಾರಂಭದಲ್ಲಿ ಅಂದರೆ ಫೆಬ್ರವರಿ ಮಧ್ಯದಲ್ಲಿ ರೋಮನ್ನರು ಲುಪರ್ಕಾಲಿಯಾ ಎಂಬ ಹಬ್ಬವನ್ನು ಆಚರಿಸುತ್ತಿದ್ದರು. ಈ ಹಬ್ಬವನ್ನು ಆಚರಿಸುವಾಗ ಹುಡುಗರು ಒಂದು ಬಾಕ್ಸ್ನಿಂದ ಹುಡುಗಿಯರ ಹೆಸರನ್ನು ತೆಗೆಯುತ್ತಿದ್ದರು. ನಂತರ ಅವರಿಬ್ಬರು ಹಬ್ಬದ ಸಮಯದಲ್ಲಿ ಗೆಳೆಯ ಮತ್ತು ಗೆಳತಿಯಾಗುತ್ತಾರೆ ಮತ್ತು ಕೆಲವೊಮ್ಮೆ ಅವರೂ ಮದುವೆಯಾಗಿರುವುದು ಉಂಟು. ಬಳಿಕ ಚರ್ಚ್ ಈ ಹಬ್ಬವನ್ನು ಕ್ರಿಶ್ಚಿಯನ್ ಆಚರಣೆಯನ್ನಾಗಿ ಮಾಡಲು ಬಯಸಿತು. ಸಂತ ವ್ಯಾಲೆಂಟನ್ನನ್ನು ನೆನಪಿಟ್ಟುಕೊಳ್ಳುವ ಸಲುವಾಗಿ ಈ ಆಚರಣೆಯನ್ನು ಬಳಸಲು ಚರ್ಚ್ ನಿರ್ಧರಿಸಿತು. ಕ್ರಮೇಣ ಸಂತ ವ್ಯಾಲೆಂಟೈನ್ ಹೆಸರನ್ನು ಜನರು ತಾವು ಪ್ರೀತಿಸಿದವರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಳಸಲಾರಂಭಿಸಿದರು.
ಪ್ರೇಮಿಗಳ ದಿನದ ಮೂಲ:
ವ್ಯಾಲೆಂಟೈನ್ ಎಂಬ ಸಂತನಿಂದ ವ್ಯಾಲೆಂಟೈನ್ಸ್ ಡೇ ಆರಂಭವಾಗಿದೆ. ಈ ಸಂತರ ಮರಣದ ದಿನವನ್ನು ಇಂದು ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತಿದೆ. ಹಾಗಾದರೆ ಸಂತರಿಗೂ ಪ್ರೇಮಕ್ಕೂ ಏನೂ ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದು ಕ್ರಿ.ಶ. 270. ರೋಮ್ ಸಾಮ್ರಾಜ್ಯವನ್ನು ಎರಡನೇ ಕ್ಲಾಡಿಯಸ್ ಎಂಬ ರಾಜ ಆಳುತ್ತಿದ್ದ. ತನ್ನ ಸರ್ವಾಧಿಕಾರಿ ಧೋರಣೆಯಿಂದ ಕುಖ್ಯಾತಿ ಪಡೆದಿದ್ದ ಸಾಮ್ರಾಜ್ಯದಲ್ಲಿ ವ್ಯಾಲೆಂಟೈನ್ ಎಂಬ ಸಂತ ಹೊಸ ಬೆಳಕಾಗಿ ಕಾಣಿಸಿಕೊಂಡಿದ್ದರು. ಕ್ಲಾಡಿಯಸ್ ಆಸ್ಥಾನದಲ್ಲಿಯೇ ವ್ಯಾಲೆಂಟೈನ್ ಸಂತರಾಗಿದ್ದರು ಎಂಬುದು ವಿಶೇಷ.
ತನ್ನ ರಾಜಾಡಳಿತದ ಅವಧಿಯಲ್ಲಿ ಕ್ಲಾಡಿಯಸ್ ಸೈನಿಕರನ್ನು ಮದುವೆಯಾಗಲು ಬಿಡುತ್ತಿರಲಿಲ್ಲ. ಯುದ್ಧದ ಸಂದರ್ಭದಲ್ಲಿ ಯುವಕರು ಮದುವೆಯಾಗಬಾರದೆಂದು ಕ್ಲಾಡಿಯಸ್ ಕಟ್ಟಪ್ಪಣೆ ಹೊರಡಿಸಿದ್ದ. ಏಕೆಂದರೆ ಯುವಕರು ಒಬ್ಬಂಟಿಯಾಗಿದ್ದರೆ ಯುದ್ಧದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಆತ ನಂಬಿದ್ದ. ಇದರಿಂದ ಸೈನಿಕರಲ್ಲಿ ಬಹಳಷ್ಟು ಮಂದಿ ಜಿಗುಪ್ಸೆಗೆ ಒಳಗಾಗಿದ್ದರು. ತಮ್ಮ ಪ್ರೀತಿ ಪಾತ್ರರನ್ನು ಪಡೆಯಲು ವಿಫರಾಗಿದ್ದರು.
ಈ ನಿರ್ಧಾರದ ಬಗ್ಗೆ ವ್ಯಾಲೆಂಟೈನ್ ಅವರಿಗೆ ಮೊದಲಿನಿಂದಲೂ ಅಸಮಾಧಾನವಿತ್ತು. ಇಡೀ ಸಾಮ್ರಾಜ್ಯದಲ್ಲಿ ಕ್ಲಾಡಿಯಸ್ನ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸಂತ ಮಾತ್ರ. ಸೈನಿಕರ ಮನದಾಳವನ್ನು ಅರಿತ ವ್ಯಾಲೆಂಟೈನ್ ರಾಜನಿಗೆ ತಿಳಿಯದಂತೆ ಪ್ರೇಮಿಗಳನ್ನು ಒಂದುಗೂಡಿಸುತ್ತಿದ್ದರಂತೆ. ಮದುವೆಯಾಗಲು ಇಚ್ಛಿಸುತ್ತಿದ್ದವರಿಗೆ ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದರಂತೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಹಲವು ಪ್ರೇಮಿಗಳ ನೆರವಿಗೆ ನಿಲ್ಲುತ್ತಿದ್ದರಂತೆ.
ಆದರೆ ಈ ವಿಚಾರ ಕ್ಲಾಡಿಯಸ್ ಕಿವಿಗೆ ಬೀಳುತ್ತದೆ. ರಾಜಧರ್ಮವನ್ನು ಮೀರಿದ ವ್ಯಾಲೆಂಟೆನ್ರನ್ನು ಅಪರಾಧಿ ಎಂದು ಘೋಷಿಸಲಾಗುತ್ತದೆ. ಈ ಅಪರಾಧಕ್ಕಾಗಿ ಅವರನ್ನು ಫೆಬ್ರವರಿ 14ರಂದು ಸೆರೆಮನೆಗೆ ತಳ್ಳಲಾಯಿತು. ಬಳಿಕ ಅವರು ಜೈಲಿನಲ್ಲೇ ಪತ್ರ ಬರೆದು ಮರಣ ಹೊಂದುತ್ತಾರೆ. ಹಲವರ ಪ್ರೀತಿಗಾಗಿ ಜೀವವನ್ನೇ ಮುಡಿಪಾಗಿಟ್ಟ ವ್ಯಾಲೆಂಟೈನ್ ಅವರ ಜ್ಞಾಪಕಾರ್ಥವಾಗಿ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯನ್ನಾಗಿಸಲು ಅಂದಿನ ರೋಮ್ ಫಾದರ್ಗಳು ತೀರ್ಮಾನಿಸಿದರು. ಅದರಂತೆ ಇಂದು ವಿಶ್ವದೆಲ್ಲೆಡೆ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಪ್ರೀತಿ, ಸ್ನೇಹ ಹಾಗೂ ಭಾವನೆಗಳು ಮನುಷ್ಯನಿಗೆ ಅತ್ಯಗತ್ಯ. ಭಾವನೆ ಹಾಗೂ ಮನಸ್ಸಿಗೆ ನೋವುಂಟಾದರೆ ಅದನ್ನು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಪ್ರೇಮಿ ಅಥವಾ ಸಂಗಾತಿಯ ಮೇಲೆ ನಿಮ್ಮ ಪ್ರೀತಿ ಸತ್ಯ ಹಾಗೂ ನಿಷ್ಕಲ್ಮಶವಾಗಿರಲಿ. ಹಾಸ್ಯಕ್ಕಾಗಿ ಅಥವಾ ತಮಾಷೆಗಾಗಿ ಯಾರ ಭಾವನೆಗಳೊಂದಿಗೂ ಆಟ ಆಡದಿರಿ.
ಪ್ರೀತಿ ಎನ್ನುವುದು ವಿಶೇಷವಾದ ಭಾವನೆ. ಆ ಭಾವನೆ ಮೂಡಿದಾಗ ವ್ಯಕ್ತಿ ಆಂತರಿಕವಾಗಿ ಸಂತೋಷ ಅನುಭವಿಸುತ್ತಾನೆ. ದಿನವೂ ವಿಶೇಷ ಹಾಗೂ ಖುಷಿಯನ್ನು ಹಂಚಿಕೊಳ್ಳುವ ಪ್ರೇಮಿಗಳಿಗೆ ತಮ್ಮ ಭಾವನೆಯನ್ನು ಹೇಳಿಕೊಳ್ಳಲು ಇಂತಹದ್ದೇ ದಿನವಾಗಬೇಕು ಅಂತೇನಿಲ್ಲ. ಆದರೂ ವರ್ಷದಲ್ಲಿ ಒಮ್ಮೆ ಆಚರಿಸುವ ಪ್ರೇಮಿಳ ದಿನದಂದು ವಿಶೇಷವಾದ ಉಡುಗೊರೆ ನೀಡುವ ಮೂಲಕ ಪ್ರೇಮಿಗಳೆಲ್ಲಾ ಸಂತೋಷವಾಗಿರಿ.