ಜಿನೀವಾ: ಒಮಿಕ್ರಾನ್ ವಿರುದ್ಧ ಲಸಿಕೆಗಳು ಪರಿಣಾಮಕಾರಿಯಾಗಿವೆ. ಏಕೆಂದರೆ ಅನೇಕ ದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಹ, ರೋಗದ ತೀವ್ರತೆ ಏರಿಕೆಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಬುಧವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಿರೀಕ್ಷೆಯಂತೆ, ಒಮಿಕ್ರಾನ್ ವಿರುದ್ಧ ಟಿ ಸೆಲ್ ರೋಗ ನಿರೋಧಕ ಶಕ್ತಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ಗಂಭೀರ ಕಾಯಿಲೆಯಿಂದ ನಮ್ಮನ್ನು ರಕ್ಷಿಸುತ್ತದೆ. ನೀವು ಲಸಿಕೆ ಹಾಕದಿದ್ದರೆ, ದಯವಿಟ್ಟು ಹಾಕಿಸಿ ಎಂದು ವಿಶ್ವದ ದೇಶಗಳಿಗೆ ಅವರು ಮನವಿ ಮಾಡಿದ್ದಾರೆ.
ಪ್ರಪಂಚದಾದ್ಯಂತ ಒಮಿಕ್ರಾನ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಲಸಿಕೆ ತೆಗೆದುಕೊಂಡ ಮತ್ತು ಇಲ್ಲಿಯವರೆಗೆ ಕೊರೊನಾದಿಂದ ಬದುಕುಳಿದ ಜನರಿಗೆ ಸೋಂಕು ತಗುಲುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಲಸಿಕೆಗಳು ಪರಿಣಾಮಕಾರಿಯಾಗಿವೆ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಅನೇಕ ಜೈವಿಕ ಅಂಶಗಳು ಲಸಿಕೆಯ ಪರಿಣಾಮಕಾರಿತ್ವವನ್ನು ನಿರ್ಧರಿಸುತ್ತವೆ. ಲಸಿಕೆ ತೆಗೆದುಕೊಳ್ಳುವವರ ವಯಸ್ಸು ಮತ್ತು ದೀರ್ಘಕಾಲದ ಕಾಯಿಲೆಗಳು ಅದರ ಪರಿಣಾಮಕಾರಿತ್ವದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತವೆ. ಒಮಿಕ್ರಾನ್ ದೇಹದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಆಕ್ರಮಿಸುತ್ತದೆ. ಆದ್ದರಿಂದ ನಮಗೆ ಹೆಚ್ಚಿನ ಮಟ್ಟದ ಪ್ರತಿಕಾಯಗಳು ಮತ್ತು ರಕ್ಷಣೆಯ ಅಗತ್ಯವಿರುತ್ತದೆ ಎಂದರು.
ಒಮಿಕ್ರಾನ್ ಬಗ್ಗೆ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಲಸಿಕೆ ಹಾಕಿಸಿಕೊಂಡ ಹಾಗೂ ಸೋಂಕಿಗೆ ಒಳಗಾದ ಜನರಲ್ಲಿಯೂ ಸಹ ಒಮಿಕ್ರಾನ್ ಪತ್ತೆಯಾಗುತ್ತಿದೆ. ಆದರೆ ಒಮಿಕ್ರಾನ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ. ಹಾಗೆ ವೆಂಟಿಲೇಟರ್‌ಗಳ ಅಗತ್ಯ ಹೆಚ್ಚಿಲ್ಲ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ವಿವಿಧ ದೇಶಗಳಲ್ಲಿ 4 ಬಾರಿ ಲಸಿಕೆ ಹಾಕಿಸಿಕೊಂಡ ಮಹಿಳೆಗೆ ಕೋವಿಡ್ ಸೋಂಕು!