ಹೈದರಾಬಾದ್: ಮಹಾಮಾರಿ ಕೊರೊನಾಗೆ ದೇಶಾದ್ಯಂತ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗಿದೆ. ಇದೀಗ ತೆಲಂಗಾಣದಲ್ಲಿ ಇಂದಿನಿಂದ ಭದ್ರತಾ ಸಿಬ್ಬಂದಿ(ಪೊಲೀಸ್ ಇಲಾಖೆ), ಪುರಸಭೆ, ಪಂಚಾಯತ್ ರಾಜ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲು ಚಾಲನೆ ಸಿಗಲಿದೆ.
ಫಲಾನುಭವಿಗಳ ಸಂಖ್ಯೆ 1,88,402 ಆಗಿದ್ದು, ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಇಂದು ಗ್ರೀನ್ ಸಿಗ್ನಲ್ ಸಿಗಲಿದೆ ಎಂದು ರಾಜ್ಯ ಆರೋಗ್ಯ ಸಚಿವ ಎಟೆಲಾ ರಾಜೇಂದ್ರನ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಅವರು, ಎಲ್ಲ ಆಸ್ಪತ್ರೆಗಳನ್ನ ಕೋವಿಡ್ ಮುಕ್ತ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಓದಿ: ಕೃಷಿ ಕಾನೂನು ವಿರೋಧಿಸಿ ದೇಶಾದ್ಯಂತ ರೈತ ಸಂಘಟನೆಗಳಿಂದ ಇಂದು ಹೆದ್ದಾರಿ ಬಂದ್
ಶ್ವಾಸಕೋಶದ ತೊಂದರೆ ಹಾಗೂ ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದ್ದು, ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಮೂಲಕ ಕ್ಯಾನ್ಸರ್ ಕೇಂದ್ರ ಸ್ಥಾಪನೆ ಮಾಡಲು ಹಣ ನೀಡುವಂತೆ ಈಗಾಗಲೇ ಕೇಂದ್ರದ ಬಳಿ ಮನವಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದು, ಬಜೆಟ್ನಲ್ಲಿ ಆರೋಗ್ಯ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಳ್ಳಲು ಶೀಘ್ರದಲ್ಲೇ ವೈದ್ಯಕೀಯ ಆರೋಗ್ಯ ಇಲಾಖೆ ಅಧಿಕಾರಿಗಳನ್ನ ಭೇಟಿ ಮಾಡುತ್ತೇನೆ ಎಂದಿದ್ದಾರೆ.