ಉತ್ತರಕಾಶಿ (ಉತ್ತರಾಖಂಡ) : ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಭಾರತೀಯ ಸೇನೆ ಹಾಗೂ ರಕ್ಷಣಾ ಸಿಬ್ಬಂದಿ ಸೇರಿ ಸುರಕ್ಷಿತವಾಗಿ ರಕ್ಷಿಸಿ ಅವರವರ ಮನೆಗಳಿಗೆ ಬಿಟ್ಟಿದ್ದಾರೆ. ಇದೀಗ ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರೊಬ್ಬರು ತಾವು ಎದುರಿಸಿದ ಸವಾಲುಗಳೇನು? ಎಂಬುದನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದೊಳಗೆ 17 ದಿನಗಳವರೆಗೆ ಕಾರ್ಮಿಕರು ಹೇಗೆ ಕಳೆದರು ಎಂಬುದನ್ನು ಎಲ್ಲರೂ ತಿಳಿಯಲು ಬಯಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಾರ್ಮಿಕರೊಬ್ಬರು ಇದೀಗ ಹಂಚಿಕೊಂಡಿರುವ ಮಾಹಿತಿಯ ವಿಡಿಯೋವೊಂದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ವೈರಲ್ ವಿಡಿಯೋ ಕಳೆದ ಕೆಲವು ದಿನಗಳಿಂದ ಸುರಂಗದೊಳಗೆ ಸಿಲುಕಿದ್ದ ಕೆಲಸಗಾರರಿಂದ ಚಿತ್ರೀಕರಿಸಲ್ಪಟ್ಟಂತೆ ಕಂಡುಬರುತ್ತಿದೆ. ಸುರಂಗದೊಳಗೆ ಅವಘಡ ಸಂಭವಿಸಿದ ದಿನದಿಂದ ಸುಮಾರು 17 ದಿನಗಳವರೆಗೆ 41 ಕಾರ್ಮಿಕರು ಹೇಗೆಲ್ಲಾ ಪರಿಸ್ಥಿತಿಯನ್ನು ಎದುರಿಸಿದ್ದೇವೆ ಎಂಬುದನ್ನು ಕಾರ್ಮಿಕರೊಬ್ಬರು ವಿಡಿಯೋದಲ್ಲಿ ಹೇಳುತ್ತಿದ್ದಾರೆ. ಅವರು ಎಷ್ಟು ದೂರದಿಂದ ನೀರು ತರಬೇಕು? ಅವರು ಯಾವ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡು ಸುರಂಗದಲ್ಲಿ ಮಲಗುತ್ತಿದ್ದರು?. ಅವರು ಪೈಪ್ ಮೂಲಕ ಆಹಾರವನ್ನು ಹೇಗೆ ಪಡೆಯುತ್ತಿದ್ದರು? ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ.
ಸುರಂಗದ ಒಳಗಿಂದಲೇ ವಿಡಿಯೋ : ಈ ವಿಡಿಯೋ ನೋಡಿದರೆ ಸುರಂಗದೊಳಗೆ ಇಷ್ಟೆಲ್ಲಾ ಸಮಸ್ಯೆ ಎದುರಿಸುತ್ತಿದ್ದರೂ ಕೂಡಾ ಕಾರ್ಮಿಕರು ಧೈರ್ಯದಿಂದ ವಾಸವಾಗಿದ್ದರು ಎಂಬುದನ್ನು ಸುಲಭವಾಗಿ ಅಂದಾಜಿಸಬಹುದು. ಇದು ಸುರಂಗದ ಒಳಗೆ ಕೆಲಸಗಾರರು ಸಿಲುಕಿದ ಎಂಟನೇ ಅಥವಾ ಒಂಬತ್ತನೇ ದಿನದ ವಿಡಿಯೋ ಎಂಬುದು ತಿಳಿದುಬಂದಿದೆ.
ನವೆಂಬರ್ 12 ರಂದು ಘಟಿಸಿದ ಅವಘಡ : ನವೆಂಬರ್ 12 ರಂದು ದೀಪಾವಳಿಯ ಬೆಳಗ್ಗೆ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದ ಒಂದು ಭಾಗ ಕುಸಿದು ಅವಘಡ ಸಂಭವಿಸಿತ್ತು. ಅವಶೇಷಗಳು ಕುಸಿದ ಕಾರಣ 41 ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದರು. ಆಗ ತಕ್ಷಣವೇ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಸಿಕ್ಕಿಬಿದ್ದ ಕಾರ್ಮಿಕರಿಗೆ ಸಣ್ಣ ಪೈಪ್‌ಗಳ ಮೂಲಕ ಆಮ್ಲಜನಕ, ವಿದ್ಯುತ್ ಮತ್ತು ಆಹಾರವನ್ನು ಪೂರೈಸಲು ವ್ಯವಸ್ಥೆ ಮಾಡಲಾಗಿತ್ತು.
ಆಗರ್ ಯಂತ್ರದಿಂದ ಸುರಂಗ ಕೊರೆತ: ಜೊತೆಗೆ ರಕ್ಷಣಾ ಕಾರ್ಯದಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಬಿಆರ್ಒ, ಯೋಜನೆ ಸಂಬಂಧಿತ ಸಂಸ್ಥೆ ಎನ್ಹೆಚ್ಐಡಿಸಿಎಲ್ ಮತ್ತು ಐಟಿಬಿಪಿ ಸೇರಿದಂತೆ ಹಲವು ಏಜೆನ್ಸಿಗಳ ತಂಡಗಳು ತೊಡಗಿಸಿಕೊಂಡಿದ್ದವು. ಆದರೆ, ತುಂಬಾ ಕಷ್ಟಕರ ಹಾಗೂ ಕ್ಲಿಷ್ಟ ಕಾರ್ಯಾಚರಣೆ ಆಗಿದ್ದರಿಂದ ಎನ್‌ಎಚ್‌ಐಡಿಸಿಎಲ್ ಅತ್ಯಾಧುನಿಕ ಆಗರ್ ಯಂತ್ರವನ್ನೂ (ಅಮೆರಿಕನ್ ನಿರ್ಮಿತ ಆಗರ್ ಡ್ರಿಲ್ಲಿಂಗ್ ಮೆಷಿನ್) ತರಿಸಲಾಗಿತ್ತು.
ಏಮ್ಸ್‌ನಲ್ಲಿ ಆರೋಗ್ಯ ತಪಾಸಣೆ : ಉತ್ತರಾಖಂಡ ಸಿಎಂ ಧಾಮಿ ಸಿಲ್ಕ್ಯಾರಾದಲ್ಲಿಯೇ ಮೊಕ್ಕಾಂ ಹೂಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಧಾಮಿ ಅವರಿಂದ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಸುರಂಗದಲ್ಲಿ ಸಿಕ್ಕಿಬಿದ್ದ ಎಲ್ಲಾ 41 ಕಾರ್ಮಿಕರನ್ನು ಏಮ್ಸ್‌ನಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿದ ನಂತರ ಅವರ ಮನೆಗಳಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: 17 ದಿನ ಸುರಂಗದೊಳಗೆ ಸಮಯ ಕಳೆದಿದ್ದು ಹೇಗೆ? ಪ್ರಧಾನಿ ಮೋದಿಗೆ ವಿವರಿಸಿದ ಕಾರ್ಮಿಕರು- ವಿಡಿಯೋ