ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಪರ್ವತಾರೋಹಿಯೊಬ್ಬರ ಮೃತದೇಹ ಸರಿಸುಮಾರು ಒಂದು ವರ್ಷದ ಬಳಿಕ ಕಂಡುಬಂದಿದೆ. ಈ ಮೂಲಕ ಹಿಮದುರಂತದಲ್ಲಿ ಮೃತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಈ ಮೊದಲು ಇತರ 27 ಜನರ ಮೃತದೇಹಗಳನ್ನು ಹೊರತೆಗೆಯಲಾಗಿತ್ತು.
2022ರ ಅಕ್ಟೋಬರ್ 4ರಂದು ನೆಹರೂ ಪರ್ವತಾರೋಹಣ ಸಂಸ್ಥೆಯ (ಎನ್‌ಐಎಂ) 32 ಪ್ರಶಿಕ್ಷಣಾರ್ಥಿಗಳು ಹಾಗೂ ಇಬ್ಬರು ಬೋಧಕರನ್ನೊಳಗೊಂಡ ಪರ್ವತಾರೋಹಿಗಳ ತಂಡವು ಹಿಮಗಳಿಂದ ಕೂಡಿರುವ ಗಡಿ ಜಿಲ್ಲೆ ಉತ್ತರಕಾಶಿಗೆ ತೆರಳಿತ್ತು. ಈ ವೇಳೆ, ದ್ರೌಪದಿ ದಂಡ-2 ಪ್ರದೇಶದಲ್ಲಿ ಭೀಕರ ಹಿಮ ಕುಸಿತವಾಗಿತ್ತು. ಇದರಿಂದ ಎಲ್ಲರೂ ಹಿಮದಲ್ಲಿ ಸಿಲುಕಿಕೊಂಡು ಕಣ್ಮರೆಯಾಗಿದ್ದರು.
ನಂತರ ನಡೆದ ಕಾರ್ಯಾಚರಣೆಯಲ್ಲಿ 27 ಜನರು ಮೃತಪಟ್ಟಿರುವುದು ಖಚಿತವಾಗಿತ್ತು. ಸುಮಾರು ವಾರ ನಿರಂತರವಾಗಿ ಹಿಮದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡು 27 ಜನರ ಮೃತದೇಹಗಳನ್ನು ಪತ್ತೆ ಹಚ್ಚಿ ಹೊರತೆಗೆಯಲಾಗಿತ್ತು. ಆದರೆ, ಇನ್ನಿಬ್ಬರು ಪರ್ವತಾರೋಹಿಗಳು ಪತ್ತೆಯಾಗಿರಲಿಲ್ಲ. ಇವರನ್ನು ಡೆಹ್ರಾಡೂನ್‌ನ ನೌಕಾಪಡೆಯ ನಾವಿಕ ವಿನಯ್ ಪನ್ವಾರ್ ಹಾಗೂ ಉತ್ತರ ಪ್ರದೇಶದ ಲಖನೌದ ಸೇನಾ ಆಸ್ಪತ್ರೆಯ ವೈದ್ಯ ಲೆಫ್ಟಿನೆಂಟ್ ಕರ್ನಲ್ ದೀಪಕ್ ವಶಿಷ್ಠ ಎಂದು ಗುರುತಿಸಲಾಗಿತ್ತು.
ಇದೀಗ ಒಂದು ವರ್ಷದ ಬಳಿಕ ವಿನಯ್ ಪನ್ವಾರ್ ಮೃತದೇಹ ಪತ್ತೆಯಾಗಿದೆ. ಪನ್ವಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉತ್ತರಕಾಶಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮತ್ತೊಬ್ಬ ಪರ್ವತಾರೋಹಿಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಣ್ಮರೆಯಾದವರ ಪತ್ತೆಗಾಗಿ ನೆಹರೂ ಪರ್ವತಾರೋಹಣ ಸಂಸ್ಥೆಯು ಸುಧಾರಿತ ತಂತ್ರಜ್ಞಾನದೊಂದಿಗೆ ಕಾರ್ಯಾಚರಣೆ ಕೈಗೊಂಡಿತ್ತು. ಇದರ ನೇತೃತ್ವವನ್ನು ಖುದ್ದು ಸಂಸ್ಥೆಯ ಪ್ರಾಂಶುಪಾಲ ಕರ್ನಲ್ ಅಂಶುಮಾನ್ ಭದೌರಿಯಾ ವಹಿಸಿದ್ದರು.
ಉಪ ಪ್ರಾಂಶುಪಾಲ ಮೇಜರ್ ದೇವಲ್ ವಾಜಪೇಯಿ ಪ್ರತಿಕ್ರಿಯಿಸಿ, "ಕಳೆದ ವರ್ಷ ನಾಪತ್ತೆಯಾಗಿದ್ದ ಇಬ್ಬರು ಪರ್ವತಾರೋಹಿಗಳಲ್ಲಿ ಒಬ್ಬರ ದೇಹವನ್ನು ಎನ್ಐಎಂ ತಂಡವು ಅಕ್ಟೋಬರ್ 4ರಂದು ಪತ್ತೆ ಮಾಡಿದೆ. ಇಂದು ಮೃತದೇಹವನ್ನು ಸೇನಾ ಹೆಲಿಕಾಪ್ಟರ್ ಮೂಲಕ ಡೋಕ್ರಾನಿ ಬಮಾಕ್‌ನಲ್ಲಿರುವ ಎನ್‌ಐಎಂ ಬೇಸ್ ಕ್ಯಾಂಪ್‌ಗೆ ತರಲಾಯಿತು. ಅಲ್ಲಿಂದ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಈ ಹಿಂದೆ ಮೃತ 27 ಜನರಲ್ಲಿ ಕರ್ನಾಟಕದ ಬೆಂಗಳೂರಿನ ರಕ್ಷಿತ್ ಮತ್ತು ವಿಕ್ರಮ್ ಎಂಬವರಿದ್ದರು. ಪುರಿಯ ನರೇಂದ್ರ ಸಿಂಗ್, ತೆಹ್ರಿ ಗರ್ವಾಲ್ನ ಸತೀಶ್ ರಾವತ್, ಕೋಲ್ಕತ್ತಾದ ಅಮಿತ್ ಕುಮಾರ್, ದೆಹಲಿಯ ಅತುನು ಧರ್, ಮೌಂಟ್ ಅಬುವಿನ ಗೋಹಿಲ್ ಅರ್ಜುನ್ ಸಿಂಗ್, ಶಿಮ್ಲಾದ ಅಂಶುಲ್ ಕೈಂತಾಳ, ಉತ್ತರಕಾಶಿಯ ಕಪಿಲ್ ಪನ್ವಾರ್ ಇತರ ಮೃತರೆಂದು ಗುರುತಿಸಲಾಗಿತ್ತು.
ಇದನ್ನೂ ಓದಿ: ಉತ್ತರಕಾಶಿ ಹಿಮಪಾತ ದುರಂತ: ಸಾವಿನ ಸಂಖ್ಯೆಕ್ಕೆ 27ಕ್ಕೇರಿಕೆ... ಮೃತರಲ್ಲಿ ಕರ್ನಾಟಕದ ಇಬ್ಬರ ಗುರುತು ಪತ್ತೆ