ಚಮೋಲಿ(ಉತ್ತರಾಖಂಡ): ದೇಶಾದ್ಯಂತ ತೈಲ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಒಂದು ಲೀಟರ್ ಪೆಟ್ರೋಲ್ -ಡೀಸೆಲ್ ಹಾಕಿಸಿಕೊಳ್ಳಬೇಕಾದರೂ ನೂರಾರು ರೂ. ಖರ್ಚು ಮಾಡಬೇಕು. ಆದರೆ, ಉತ್ತರಾಖಂಡ್ನಲ್ಲಿ ಕೆಲ ಗಂಟೆಗಳ ಕಾಲ ಡೀಸೆಲ್ ಪ್ರವಾಹ ಉಂಟಾಗಿದ್ದು, ಜನರು ಡಬ್ಬಿ ಹಿಡಿದುಕೊಂಡು ತಾ ಮುಂದು ನಾ ಮುಂದು ಎಂಬಂತೆ ತುಂಬಿಸಿಕೊಂಡಿದ್ದಾರೆ.
ಉತ್ತರಾಖಂಡ್ದ ಬದರಿನಾಥ ಹೆದ್ದಾರಿಯಲ್ಲಿ ಹಠಾತ್ ಆಗಿ ಡೀಸೆಲ್ ಪ್ರವಾಹ ಕಂಡು ಬಂದಿದ್ದು, ದಿಗ್ಬ್ರಾಂತರಾದ ಜನರು ಕೈಯಲ್ಲಿ ಡಬ್ಬಿ ಹಿಡಿದುಕೊಂಡು ತುಂಬಿಕೊಳ್ಳಲು ಮುಂದಾಗಿರುವ ಘಟನೆ ನಡೆದಿದೆ. ಈ ವೇಳೆ ನೂಕುನುಗ್ಗಲು ಸಹ ಉಂಟಾಗಿದೆ.
ಉತ್ತರಾಖಂಡ್ನ ಚಮೋಲಿಯ ಕರ್ನ್ಪ್ರಯಾಗ್ನ ಬದರಿನಾಥ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಪೈಪ್ಲೈನ್ನಿಂದ ಡೀಸೆಲ್ ಸೋರಿಕೆಯಾಗಿದ್ದು, ತುಂಬಿಕೊಳ್ಳಲು ನೂರಾರು ಜನರು ಒಟ್ಟಿಗೆ ಸೇರಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ಈ ಘಟನೆ ನಡೆದಿದ್ದು, ಕೆಲವರು ರಸ್ತೆಯಲ್ಲಿ ತಮ್ಮ ವಾಹನ ನಿಲ್ಲಿಸಿ, ಡೀಸೆಲ್ ತುಂಬಿಸಿಕೊಂಡಿದ್ದಾರೆ. ಕೆಲ ಹೊತ್ತಿನ ನಂತರ ಇದಕ್ಕೆ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗಿದೆ. ಪೈಪ್ಲೈನ್ ಆಪರೇಟರ್ ಸ್ಥಳಕ್ಕೆ ಬರುವಷ್ಟರಲ್ಲಿ ಸಾವಿರಾರು ಲೀಟರ್ ಡೀಸೆಲ್ ಜನರು ತುಂಬಿಕೊಂಡಿದ್ದು, ಒಂದಿಷ್ಟು ಚರಂಡಿ ಪಾಲಾಗಿದೆ.