ಡೆಹ್ರಾಡೂನ್ (ಉತ್ತರಾಖಂಡ): ದೇಶದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಗೊಳ್ಳುವ ವೇಳೆಯಲ್ಲಿ ಕೋವಿಡ್ ಪ್ರೋಟೋಕಾಲ್ ಉಲ್ಲಂಘಿಸಿ ಕುಂಭಮೇಳ ನಡೆಸಿದ್ದರ ವಿರುದ್ಧ ಆಕ್ರೋಶ ಹೊರಹಾಕಿರುವ ಉತ್ತರಾಖಂಡ ಹೈಕೋರ್ಟ್, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ವ್ಯಾಪಕ ಟೀಕೆಗೆ ಗುರಿಯಾಗಿರುವ ಕುಂಭಮೇಳದ ವಿಚಾರದಲ್ಲಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜ (ಪಿಐಎಲ್) ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಆರ್.ಎಸ್. ಚೌಹಾಣ್ ಮತ್ತು ನ್ಯಾಯಮೂರ್ತಿ ಅಲೋಕ್ ವರ್ಮಾ ನಡೆಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಕೊರೊನಾ ಸ್ಫೋಟಕ್ಕೆ ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳೇ ಕಾರಣ: WHO
"ರಾಜ್ಯದಲ್ಲಿ ಈ ಕುಂಭಮೇಳ ಮತ್ತು ಚಾರ್ ಧಾಮ್ ಯಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಾಗ ಕೋವಿಡ್ ನಿಯಮಗಳನ್ನು ಅನುಸರಿಸಲಾಗಿದೆಯೇ? ನಾವು ಮೊದಲು ಕುಂಭಮೇಳ ನಡೆಸಿ ತಪ್ಪುಮಾಡಿದ್ದೇವೆ, ಬಳಿಕ ಚಾರ್ ಧಾಮ್ ಯಾತ್ರೆ.. ಯಾಕೆ ನಾವು ಪದೇ ಪದೇ ಮುಜುಗರಕ್ಕೆ ಒಳಗಾಗುವ ಕೆಲಸ ಮಾಡುತ್ತೇವೆ?" ಎಂದು ಉತ್ತರಾಖಂಡ ಸರ್ಕಾರವನ್ನ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.
'ನೀವು ನಮ್ಮನ್ನ ಮೂರ್ಖರಾಗಿಸಬಹುದು, ಜನರನ್ನಲ್ಲ..'
"ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೇದಾರನಾಥ ಮತ್ತು ಬದ್ರಿನಾಥ್ ದೇವಾಲಯಗಳ ವಿಡಿಯೋಗಳನ್ನು ನೋಡಿ. ಪುರೋಹಿತರೇ ಅಲ್ಲಿ ದೈಹಿಕ ಅಂತರ ಕಾಪಾಡಿಕೊಂಡಿಲ್ಲ. ಈ ಬಗ್ಗೆ ನಿರ್ಧರಿಸುವುದು ನಮ್ಮ ಕೆಲಸವಲ್ಲ. ಈ ಕೆಲಸ ಸರ್ಕಾರಕ್ಕೇ ಸೇರಿದ್ದು. ಆದರೆ ನೀವು ನ್ಯಾಯಾಲಯವನ್ನು ಮೂರ್ಖರಾಗಿಸಬಹುದು, ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಲಕ್ಷಾಂತರ ಜನರ ಜೀವದೊಂದಿಗೆ ಆಟವಾಡುತ್ತಿದೆ. ಇದೊಂದು ನಿರ್ಲಕ್ಷ್ಯ ಸರ್ಕಾರ" ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ, ಮುಂದಿನ ವಿಚಾರಣೆಯನ್ನು ಜೂನ್ 9ಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ: ಕೊರೊನಾ ಮರೆತ ಭಕ್ತರು: ನಿನ್ನೆ ಗಂಗೆಯಲ್ಲಿ 'ಶಾಹಿ ಸ್ನಾನ' ಮಾಡಿದ್ದು ಬರೋಬ್ಬರಿ 35 ಲಕ್ಷ ಮಂದಿ!
ಉತ್ತರಾಖಂಡದ ಹರಿದ್ವಾರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ನಡೆದ ಶಾಹಿ ಸ್ನಾನದಲ್ಲಿ ಲಕ್ಷಾಂತರ ಭಕ್ತರು, ಸಾಧು-ಸಂತರು ಪಾಲ್ಗೊಂಡಿದ್ದರು. ಈ ವೇಳೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕುಂಭಮೇಳ ಆಚರಿಸಿದ್ದರು. ದೇಶಾದ್ಯಂತ ಇದರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಿಂದೂ ಆಚಾರ್ಯ ಸಭಾದ ಅಧ್ಯಕ್ಷರಾದ ಸ್ವಾಮಿ ಅವಧೇಶಾನಂದ ಗಿರಿ ಅವರಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. ಆ ಬಳಿಕ ಅವಧೇಶಾನಂದ ಸ್ವಾಮೀಜಿ ಕುಂಭಮೇಳ ಮೊಟಕುಗೊಳಿಸಿದ್ದರು.