ಉತ್ತರಾಖಂಡ: ಕಳೆದ ಡಿಸೆಂಬರ್ 30ರಂದು ಭಾರತೀಯ ಕ್ರಿಕೆಟ್ ತಂಡದ ಆಟಗಾರ ರಿಷಬ್ ಪಂತ್ ಅವರು ದೆಹಲಿಯಿಂದ ಮನೆಗೆ ವಾಪಸಾಗುತ್ತಿದ್ದಾಗ ಕಾರು ಅಪಘಾತ ಸಂಭವಿಸಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಸಂಭವಿಸಿದ ಬಳಿಕ, ತಕ್ಷಣ ಪಂತ್ ರಕ್ಷಣೆಗೆ ಧಾವಿಸಿ ಅವರ ಜೀವ ಉಳಿಸಲು ಸಹಾಯ ಮಾಡಿದ ಹರಿಯಾಣ ರಸ್ತೆ ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಅನಾಥ ಮತ್ತು ಬಡ ಮಕ್ಕಳಿಗಾಗಿ ನಿರ್ಮಿಸಲಾದ ವಸತಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, 'ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕ್ರಿಕೆಟಿಗನ ಪ್ರಾಣ ಉಳಿಸುವ ಮೂಲಕ ಹರಿಯಾಣದ ರಸ್ತೆ ಸಾರಿಗೆ ಬಸ್ ಚಾಲಕ ಸುಶೀಲ್ ಕುಮಾರ್ ಮತ್ತು ನಿರ್ವಾಹಕ ಪರಮ್‌ಜಿತ್ ಅವರು ಇತರರಿಗೆ ಮಾದರಿಯಾಗಿದ್ದಾರೆ. ಪಂತ್ ಸಂಚರಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಉರುಳುವುದನ್ನು ನೋಡಿದ ಇವರು, ಕೂಡಲೇ ರಸ್ತೆಬದಿಯಲ್ಲಿ ಬಸ್ ನಿಲ್ಲಿಸಿ ಕ್ರಿಕೆಟಿಗನನ್ನು ರಕ್ಷಿಸಿದ್ದಾರೆ. ಪಂತ್ ಅವರನ್ನು ಕಾರಿನಿಂದ ಹೊರಗೆಳೆದು ಪೊಲೀಸರಿಗೆ ಕರೆ ಮಾಡಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕನ ಮಾನವೀಯ ಗುಣವನ್ನು ಮೆಚ್ಚಿ ಬರುವ ಜನವರಿ 26 ರಂದು ರಾಜ್ಯ ಸರ್ಕಾರ ಅವರನ್ನು ಗೌರವಿಸಲಿದೆ' ಎಂದು ಹೇಳಿದರು.
ಇದನ್ನೂ ಓದಿ: ಕ್ರಿಕೆಟಿಗ ರಿಷಭ್ ಪಂತ್ ಕಾರು ಅಪಘಾತ : ವಾಹನ ಸಂಪೂರ್ಣ ಭಸ್ಮ.. ಡೆಹ್ರಾಡೂನ್ ಆಸ್ಪತ್ರೆಗೆ ಶಿಫ್ಟ್
ಮ್ಯಾಕ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪಂತ್ ಆರೋಗ್ಯ ವಿಚಾರಿಸಿದ ಸಿಎಂ: ಭಾನುವಾರ ರಿಷಬ್ ಪಂತ್ ಚಿಕಿತ್ಸೆ ಪಡೆಯುತ್ತಿರುವ ಮ್ಯಾಕ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಸುಮಾರು ಒಂದು ಗಂಟೆಗಳ ಕಾಲ ಪಂತ್ ಅವರ ತಾಯಿ, ಸಹೋದರಿ ಮತ್ತು ವೈದ್ಯರಿಂದ ಅವರ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಪಡೆದರು. ಅಗತ್ಯವಿದ್ದಲ್ಲಿ ಅವರನ್ನು ಉನ್ನತ ಸೌಲಭ್ಯಕ್ಕೆ ಸ್ಥಳಾಂತರಿಸಲು ಹಾಗೂ ಕ್ರಿಕೆಟಿಗನ ಚಿಕಿತ್ಸೆಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಭರವಸೆ ಕೊಟ್ಟರು.
'ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿದ್ದ ಗುಂಡಿ ತಪ್ಪಿಸಲು ಹೋದಾಗ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಸದ್ಯಕ್ಕೆ ಪಂತ್ ಆರೋಗ್ಯ ಸ್ಥಿರವಾಗಿದೆ. ಆರೋಗ್ಯ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಶಿಖರ್ ಧವನ್ ಸಲಹೆ ಪಾಲಿಸಿದ್ದರೆ ಪಂತ್ಗೆ ಈ ಆಪತ್ತು ಬರುತ್ತಿರಲಿಲ್ಲವೇ? ನೆಟ್ಟಿಗರ ವಲಯದಲ್ಲಿ ನಡೆಯಿತು ಚರ್ಚೆ
ರಿಷಬ್ ಪಂತ್ ಕಾರು ಅಪಘಾತ ಎಲ್ಲಿ, ಯಾವಾಗ?: ಹರಿದ್ವಾರ ಜಿಲ್ಲೆಯ ರೂರ್ಕಿ ಬಳಿ ಪಂತ್ ಅವರ ಐಷಾರಾಮಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದ್ದು, ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದರು. ಶುಕ್ರವಾರ ಮುಂಜಾನೆ 5.30ರ ಸುಮಾರಿಗೆ ಅಪಘಾತ ಸಂಭವಿಸಿತ್ತು.