ಡೆಹ್ರಾಡೂನ್(ಉತ್ತರಾಖಂಡ್): ಉತ್ತರಾಖಂಡದ ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಸಂಜೆ ರಾಜಭವನಕ್ಕೆ ತೆರಳಿದ ಅವರು ಗವರ್ನರ್ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು. ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿರುವಾಗಲೇ ಈ ಬೆಳವಣಿಗೆ ನಡೆದಿದೆ.
2017ರಲ್ಲಿ ಬಹುಮತದೊಂದಿಗೆ ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಸುಮಾರು ನಾಲ್ಕು ವರ್ಷಗಳ ಕಾಲ ತ್ರಿವೇಂದ್ರ ಸಿಂಗ್ ರಾವತ್ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಕಳೆದ ಕೆಲವು ತಿಂಗಳಿಂದ ಸಿಎಂ ಕಾರ್ಯಶೈಲಿ ಬಗ್ಗೆ ಅನೇಕ ಸಚಿವರು, ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಕಳೆದ ಸೋಮವಾರ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ದೆಹಲಿಗೂ ಕರೆಯಿಸಿಕೊಂಡಿತ್ತು. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜತೆ ಮಾತುಕತೆ ನಡೆದಿತ್ತು.
2017ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಆಯ್ಕೆಯಾಗಿದ್ದ ಬಿಜೆಪಿಗೆ ಶಾಸಕಾಂಗ ನಾಯಕರಾಗಿ ರಾವತ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಬಳಿಕ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು.
ಕಳೆದ ವಾರ ಉತ್ತರಾಖಂಡ್ ಉಸ್ತುವಾರಿಗಳಾದ ರಮಣ್ ಸಿಂಗ್, ದುಶ್ಯಂತ್ ಗೌತಮ್, ತ್ರಿವೇಂದ್ರ ಸಿಂಗ್ ರಾವತ್, ಅಜಯ್ ಭಟ್, ನರೇಶ್ ಬನ್ಸಾಲ್, ಮಾಲಾ ರಾಜ್ಯಲಕ್ಷ್ಮಿ ಇತರರ ನೇತೃತ್ವದ ಕೋರ್ ಕಮಿಟಿ ಸಭೆ ನಡೆದಿತ್ತು. ಈ ವೇಳೆ ಸುಮಾರು 20 ಎಂಎಲ್ಎಗಳು ಹಾಗೂ ಸಚಿವರು ರಾವತ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು ಎಂದು ತಿಳಿದು ಬಂದಿದೆ.