ಡೆಹ್ರಾಡೂನ್ (ಉತ್ತರಾಖಂಡ್): ಮುಂಬರುವ ಉಪ ಚುನಾವಣೆಯಲ್ಲಿ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಚಂಪಾವತ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಗುರುವಾರ ಪ್ರಕಟಣೆ ಹೊರಡಿಸಿದೆ.
ಕೆಳದ ಮಾರ್ಚ್ನಲ್ಲಿ ನಡೆದ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಗೆದ್ದಿದ್ದರೂ, ಧಾಮಿ ಖತಿಮಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭುವನ್ ಚಂದ್ರ ಕಪ್ರಿ ವಿರುದ್ಧ ಸೋಲು ಕಂಡಿದ್ದರು. ಚುನಾವಣೆಯಲ್ಲಿ ಸೋತಿದ್ದರೂ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಲಾಗಿದೆ.
ಇದೀಗ ಚಂಪಾವತ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೈಲಾಶ್ ಗೆಹ್ಟೋರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಿಎಂ ಧಾಮಿ ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ದಾರಿ ಮಾಡಿಕೊಟ್ಟಿದ್ದಾರೆ. ಇತ್ತ, ಸೋಮವಾರ ಚುನಾವಣಾ ಆಯೋಗವು ಒಡಿಶಾ, ಕೇರಳ ಮತ್ತು ಉತ್ತರಾಖಂಡ್ನ ತಲಾ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಿಸಿದೆ. ಚುನಾವಣಾ ಆಯೋಗದ ಪ್ರಕಾರ ಈ ಕ್ಷೇತ್ರಗಳಿಗೆ ಮೇ 31ರಂದು ಮತದಾನ ನಡೆಯಲಿದ್ದು, ಜೂನ್ 3ರಂದು ಮತ ಎಣಿಕೆಯಾಗಲಿದೆ.
ಅಂತೆಯೇ, ಬಿಜೆಪಿಯು ಚಂಪಾವತ್ ವಿಧಾನಸಭಾ ಕ್ಷೇತ್ರದಿಂದ ಸಿಎಂ ಪುಷ್ಕರ್ ಸಿಂಗ್ ಧಾಮಿ ಸ್ಪರ್ಧಿಸುವ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದೆ. ಉಪಚುನಾವಣೆಯಲ್ಲಿ ಧಾಮಿ ಅವರ ಸ್ಪರ್ಧೆಗೆ ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಅನುಮೋದನೆ ನೀಡಿದೆ ಎಂದು ಬಿಜೆಪಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: 2017ರ 'ಆಜಾದಿ ಮಾರ್ಚ್' ಪ್ರಕರಣ: ಶಾಸಕ ಜಿಗ್ನೇಶ್ ಮೇವಾನಿಗೆ 3 ತಿಂಗಳ ಜೈಲು ಶಿಕ್ಷೆ