ಡೆಹ್ರಾಡೂನ್(ಉತ್ತರಾಖಂಡ): 2022ರ ವಿಧಾನಸಭೆ ಚುನಾವಣೆಯನ್ನು ರಾಜ್ಯ ಎದುರು ನೋಡುತ್ತಿರುವುದಾಗಲೇ ಆಡಳಿತಾರೂಢ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಸಾರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಪುಟ ದರ್ಜೆ ಸಚಿವ ಯಶ್‌ಪಾಲ್ ಆರ್ಯ ಹಾಗೂ ಅವರ ಪುತ್ರ ಸಂಜಯ್ ಆರ್ಯ ಇಂದು ಬಿಜೆಪಿ ತ್ಯಜಿಸಿ 'ಕೈ' ಹಿಡಿದಿದ್ದಾರೆ.
ಮುಖ್ಯಮಂತ್ರಿ ಧಮಿ ಸಂಪುಟದದಲ್ಲಿರುವ ಯಶ್‌ಪಾಲ್ ಆರ್ಯ ನೈನಿತಾಲ್ ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಇವತ್ತು ಅವರು ದೆಹಲಿಯಲ್ಲಿ ಹರೀಶ್ ರಾವತ್ ಹಾಗೂ ಕೆ.ಸಿ. ವೇಣುಗೋಪಾಲ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ, 'ಯಶ್‌ಪಾಲ್ ಅವರು ಉತ್ತರಾಖಂಡದ ಸಂಪುಟ ದರ್ಜೆಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ' ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ನವದೆಹಲಿಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಸಚಿವ ಯಶ್‌ಪಾಲ್ ಬಿಜೆಪಿ ತ್ಯಜಿಸುವ ಮುನ್ಸೂಚನೆ ನೀಡಿದ್ದರು. ಮೂಲಗಳ ಪ್ರಕಾರ, ಮುಂಬರುವ ವಿಧಾನಸಭೆ ಚುನಾವಣೆಗೆ ತಮ್ಮ ಬೆಂಬಲಿಗರು ಸ್ಪರ್ಧಿಸಲು ಕಾಂಗ್ರೆಸ್ ಹೈಕಮಾಂಡ್ ಬಳಿ ಆರ್ಯ 6 ಟಿಕೆಟ್ ಕೇಳಿದ್ದಾರೆ ಎಂಬ ಮಾಹಿತಿ ಇದೆ. ಇನ್ನು, ಆರ್ಯ ಅವರು ಬಿಜೆಪಿ ಸೇರುವುದಕ್ಕೂ ಮುನ್ನ ಸಾಕಷ್ಟು ಕಾಲ ಕಾಂಗ್ರೆಸ್‌ನಲ್ಲಿದ್ದವರು.
ಇಬ್ಬರು ಕಾಂಗ್ರೆಸ್ಸಿಗರು, ಓರ್ವ ಸ್ವತಂತ್ರ ಅಭ್ಯರ್ಥಿ ಬಿಜೆಪಿ ಸೇರ್ಪಡೆ:
ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ರಾಜ್ಯದಲ್ಲಿ ಪಕ್ಷಾಂತರ ಪರ್ವ ನಡೆಯುತ್ತಿದೆ. ಕಾಂಗ್ರೆಸ್ ಶಾಸಕ ರಾಜ್‌ಕುಮಾರ್ ಮತ್ತು ಪ್ರಿತಂ ಸಿಂಗ್ ಪವಾರ್ ಬಿಜೆಪಿ ಸೇರಿದ ಬಳಿಕ ಸ್ವತಂತ್ರ ಶಾಸಕ ರಾಮ್ ಸಿಂಗ್ ಕೈಡಾ ಇತ್ತೀಚೆಗೆ ಬಿಜೆಪಿ ಸೇರಿಕೊಂಡಿದ್ದರು.
ಕಾಂಗ್ರೆಸ್‌ನ ಬಂಡಾಯ ಶಾಸಕರು ಬಿಜೆಪಿ ಸೇರಿದ ಹಿನ್ನೆಲೆ:
2017ರ ಚುನಾವಣೆಗೂ ಮುನ್ನ ಮಾಜಿ ಸಿಎಂ ವಿಜಯ್ ಬಹುಗುಣ ಸೇರಿದಂತೆ 9 ಮಂದಿ ಬಂಡಾಯ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದನ್ನು ಇಲ್ಲಿ ನೆನಪಿಸಬಹುದು.