ನವದೆಹಲಿ: ಉತ್ತರಾಖಂಡದಲ್ಲಿ ನಾಯಕತ್ವ ಬದಲಾವಣೆ ಊಹಾಪೋಹಗಳು ಬಲವಾಗಿ ಕೇಳಿ ಬರುತ್ತಿವೆ. ಈ ನಡುವೆ, ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಸೋಮವಾರ ತಡರಾತ್ರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಈ ನಡುವೆ ಈ ಬಗ್ಗೆ ಮಾತನಾಡಿರುವ ಬಿಜೆಪಿ ಎಂಎಲ್ಎ ಮುನ್ನಾ ಸಿಂಗ್ ಚೌಹಾಣ್, ಸಿಎಂ ರಾವತ್ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಇಂದು ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂಬ ವರದಿಗಳನ್ನು ಅವರು ಇದೇ ವೇಳೆ ನಿರಾಕರಿಸಿದ್ದಾರೆ. ತ್ರಿವೇಂದ್ರ ಸಿಂಗ್ ರಾವತ್ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ. ಅವರು ಇಂದು ಡೆಹರಾಡೂನ್ಗೆ ವಾಪಸ್ ಆಗಲಿದ್ದಾರೆ ಎಂದು ಮುನ್ನಾ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಸಿಎಂ ರಾವತ್ ಅವರು ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಜತೆ ರಾಜ್ಯದ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದರು, ಈ ವೇಳೆ ಉತ್ತರಾಖಂಡ್ ಉಸ್ತುವಾರಿ ದುಶ್ಯಂತ್ ಕುಮಾರ್ ಗೌತಮ್ ಮತ್ತು ರಮಣ್ ಸಿಂಗ್ ಅವರನ್ನು ಶನಿವಾರ ಡೆಹರಾಡೂನ್ಗೆ ಬಂದು ವರದಿ ಪಡೆದಿದ್ದು, ಆ ವರದಿಯನ್ನು ಸೋಮವಾರ ಹೈಕಮಾಂಡ್ಗೆ ಕೊಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಇದೇ ವರದಿ ಆಧಾರದ ಮೇಲೆ ಸಿಎಂ ರಾವತ್ ಅವರನ್ನ ಹೈಕಮಾಂಡ್ ಕರೆಯಿಸಿಕೊಂಡಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಳೆದ ವಾರ ಉತ್ತರಾಖಂಡ್ ಉಸ್ತುವಾರಿಗಳಾದ ರಮಣ್ ಸಿಂಗ್, ದುಶ್ಯಂತ್ ಗೌತಮ್, ತ್ರಿವೇಂದ್ರ ಸಿಂಗ್ ರಾವತ್, ಅಜಯ್ ಭಟ್, ನರೇಶ್ ಬನ್ಸಾಲ್, ಮಾಲಾ ರಾಜ್ಯ ಲಕ್ಷ್ಮಿ ಇತರರ ನೇತೃತ್ವದ ಕೋರ್ ಕಮಿಟಿ ಸಭೆ ನಡೆದಿತ್ತು. ಇನ್ನು ಸುಮಾರು 20 ಎಂಎಲ್ಎಗಳು ಹಾಗೂ ಸಚಿವರು ರಾವತ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲ ಕಾರಣಗಳಿಂದ ಹೈಕಮಾಂಡ್ ನಿನ್ನೆ ಸಿಎಂ ರಾವತ್ ಅವರಿಂದ ಸ್ಪಷ್ಟನೆ ಪಡೆದಿದೆ ಎಂದು ಹೇಳಲಾಗುತ್ತಿದೆ.