ಉತ್ತರಕಾಶಿ (ಉತ್ತರಾಖಂಡ): ಬ್ರಹ್ಮಖಾಲ್ ಮತ್ತು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್ ನಡುವೆ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗವು ಭಾನುವಾರ ಮುಂಜಾನೆ ಕುಸಿದಿದ್ದು, ಸುಮಾರು 40 ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಕಾಶಿಯಲ್ಲಿ ಸುರಂಗ ಅಪಘಾತದ ನಂತರ ಎಲ್ಲಾ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಿಎಂ ಧಾಮಿ ಕೂಡ ಘಟನೆಯ ಮೇಲೆ ನಿಗಾವಹಿಸಿದ್ದಾರೆ. ಇದೀಗ ಪ್ರಧಾನಿ ಮೋದಿ ಅವರು ಉತ್ತರಕಾಶಿ ಸಿಲ್ಕ್ಯಾರ ಸುರಂಗ ಅಪಘಾತದ ಬಗ್ಗೆ ಸಿಎಂ ಧಾಮಿ ಅವರಿಂದ ಮಾಹಿತಿ ಪಡೆದಿದ್ದಾರೆ.
ಪ್ರಧಾನಿ ಮೋದಿ ಭಾನುವಾರ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು. ಲೆಪ್ಚಾದಿಂದ ಹಿಂದಿರುಗಿದ ನಂತರ ಪ್ರಧಾನಿ ಮೋದಿ ಅವರು ಸಿಎಂ ಧಾಮಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಉತ್ತರಕಾಶಿ ಸಿಲ್ಕ್ಯಾರ ಸುರಂಗ ಅಪಘಾತದ ಬಗ್ಗೆ ಪ್ರಧಾನಿ ಮೋದಿ ವಿವರವಾದ ಮಾಹಿತಿ ಪಡೆದರು. ಸಿಎಂ ಧಾಮಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಈ ಮಾಹಿತಿ ನೀಡಿದ್ದಾರೆ.
ಉತ್ತರಕಾಶಿಯ ಸಿಲ್ಕ್ಯಾರಾ ಬಳಿ ಸುರಂಗ ನಿರ್ಮಾಣದ ವೇಳೆ ಬರುತ್ತಿರುವ ಅವಶೇಷಗಳಿಂದಾಗಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಸ್ಥಿತಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಕುರಿತು ಪ್ರಧಾನಿ ಮೋದಿ ಇಂದು ವಿವರವಾದ ಮಾಹಿತಿಯನ್ನು ಪಡೆದರು ಎಂದು ಎಕ್ಸ್ನಲ್ಲಿ ಸಿಎಂ ಧಾಮಿ ಬರೆದಿದ್ದಾರೆ. ಇದರಲ್ಲಿ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ನಡೆಸಿದ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಪ್ರಧಾನಿಗೆ ವಿವರವಾದ ಮಾಹಿತಿ ಮತ್ತು ಪರಿಸ್ಥಿತಿಯ ಬಗ್ಗೆ ವರದಿ ನೀಡಲಾಯಿತು ಎಂದು ತಿಳಿಸಿದರು.
ಈ ಅಪಘಾತವನ್ನು ಎದುರಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ಅಲ್ಲದೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಕರಿಸುವಂತೆ ಭಾರತ ಸರ್ಕಾರದ ಕೇಂದ್ರ ಏಜೆನ್ಸಿಗಳಿಗೆ ಪ್ರಧಾನಿ ಮೋದಿ ನಿರ್ದೇಶನ ನೀಡಿದ್ದಾರೆ ಎಂದು ಸಿಎಂ ಧಾಮಿ ಹೇಳಿದ್ದಾರೆ.
ಪೊಲೀಸ್ ಅಧಿಕಾರಿ ಹೇಳಿದ್ದೇನು?: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಪೊಲೀಸರು ಅಪಘಾತದ ಬಗ್ಗೆ ಮಾಹಿತಿ ನೀಡಿದ ತಕ್ಷಣ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ತಿಳಿಸಿದ್ದಾರೆ.
ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ನಿವಾಸಿಗಳು ಸೇರಿದಂತೆ ಒಟ್ಟ 40 ಕಾರ್ಮಿಕರು ಸುರಂಗದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವು ಪಟ್ಟಿ ಬಿಡುಗಡೆ ಮಾಡಿದೆ ಎಂದು ಪೊಲೀಸ್ ಅಧಿಕಾರಿ ಯುದುವಂಶಿ ತಿಳಿಸಿದ್ದಾರೆ.
ಕಳೆದ 12 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದರೂ ಇದುವರೆಗೆ ಯಾವುದೇ ಪ್ರಗತಿಯಾಗಿಲ್ಲ. ರಕ್ಷಣಾ ಕಾರ್ಯಾಚರಣೆಯು ಯುದ್ಧೋಪಾದಿಯಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗುವುದು. ಸುರಂಗದೊಳಗೆ ಆಮ್ಲಜನಕದ ಪೈಪ್ ಅನ್ನು ತಲುಪಿಸಲಾಗಿದೆ. ಘಟನೆಯಲ್ಲಿ ಸಾವು-ನೋವುಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ.
ಸುರಂಗದೊಳಗೆ ಮುಂದುವರಿದ ರಕ್ಷಣಾ ಕಾರ್ಯ: ಈ ನಡುವೆ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ಮಾತನಾಡಿ, ಘಟನೆ ಕುರಿತು ನಿನ್ನೆ ಎನ್‌ಎಚ್‌ಡಿಸಿಎಲ್‌ನ ಮಾಜಿ ವ್ಯವಸ್ಥಾಪಕ ಕರ್ನಲ್ ದೀಪಕ್ ಪಾಟೀಲ್ ಅವರಿಗೆ ಮಾಹಿತಿ ನೀಡಲಾಯಿತು. ಮತ್ತೊಂದೆಡೆ, ಸಿಲ್ಕ್ಯಾರ್ ಕಡೆಯಿಂದ ಸುರಂಗದ 270 ಮೀಟರ್ ಭಾಗದ ಬಳಿ 30 ಮೀಟರ್ ಪ್ರದೇಶದಲ್ಲಿ ಅವಶೇಷಗಳು ಬಿದ್ದಿದ್ದರಿಂದ ಸುಮಾರು 40 ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ. ಸಿಲ್ಕ್ಯಾರ್ ಸುರಂಗ ಅಪಘಾತದ ನಂತರ ಸಹಾಯಕ್ಕಾಗಿ +917455991223 ಸಹಾಯವಾಣಿ ಸಂಖ್ಯೆ ನೀಡಲಾಗಿದೆ ಎಂದರು.
ಅವರು ಸಿಕ್ಕಿಬಿದ್ದಿರುವ ಸ್ಥಳ ಎಷ್ಟು ದೂರವಾಗಿದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ. ಇದು ತುಂಬಾ ಉದ್ದವಾಗಿದೆ ಎಂದು ತೋರುತ್ತಿಲ್ಲ. ಶೀಘ್ರದಲ್ಲೇ ಅವರನ್ನು ತಲುಪಲು ನಾವು ಆಶಿಸುತ್ತೇವೆ. ಆದರೆ, ಅವರು ಸ್ವಲ್ಪ ಆಮ್ಲಜನಕ ಬಿಡುಗಡೆ ಮಾಡಿರುವುದರಿಂದ ಅವರು ಸುರಕ್ಷಿತವಾಗಿದ್ದಾರೆ ಎಂಬ ಸೂಚನೆಗಳಿವೆ ಎಂದು ಕಂಪನಿ ಪ್ರಾಜೆಕ್ಟ್ ಮ್ಯಾನೇಜರ್ ರಾಜೇಶ್ ಪನ್ವಾರ್ ಹೇಳಿದರು.
ಸುಮಾರು 160 ರಕ್ಷಕರು ಡ್ರಿಲ್ಲಿಂಗ್ ಉಪಕರಣಗಳು ಮತ್ತು ಅಗೆಯುವ ಯಂತ್ರಗಳ ಸಹಾಯದಿಂದ ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡಲು ಲಾಂಗ್ ಡ್ರಿಲ್ಲಿಂಗ್ ಯಂತ್ರದಂತಹ ಇನ್ನು ಕೆಲವು ಉಪಕರಣಗಳು ಸೈಟ್ಗಳನ್ನು ತಲುಪಲಿವೆ. ಕಮಾಂಡಿಂಗ್ ಆಫೀಸರ್ ನಮನ್ ನರುಲಾ ಮತ್ತು ಸಹಾಯಕ ಕಮಾಂಡೆಂಟ್ ಜಾಧವ್ ವೈಭವ್ ನೇತೃತ್ವದ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ ಎಂದು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಓದಿ: ಯೋಧರೊಂದಿಗೆ ಬೆಳಕಿನ ಹಬ್ಬ ಆಚರಿಸಿದ ಮೋದಿ: 'ದೇಶ ನಿಮಗೆ ಋಣಿ' ಎಂದ ಪ್ರಧಾನಿ