ನವದೆಹಲಿ: ಕೋವಿಡ್ ಎರಡನೇ ತರಂಗವನ್ನು ಉತ್ತರಪ್ರದೇಶ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ರುದ್ರಾಕ್ಷ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಎರಡನೇ ಅಲೆಯ ಆರಂಭದಲ್ಲಿ ನಿತ್ಯ 30 ಸಾವಿರ ಪ್ರಕರಣಗಳು ದಾಖಲಾಗಿದ್ದವು. ಆದರೂ, ಛಲ ಬಿಡದೇ ಯುಪಿ ಸರ್ಕಾರ ಸಮರ್ಥವಾಗಿ ಕೋವಿಡ್ ವಿರುದ್ಧ ಹೋರಾಡಿದೆ. ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ಉತ್ತರಪ್ರದೇಶ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಇಡೀ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರಪ್ರದೇಶ. ಇಲ್ಲಿನ ಸರ್ಕಾರ ಕೋವಿಡ್ ನಿಭಾಯಿಸಿದ ರೀತಿ ಪ್ರಶಂಸೆಗೆ ಅರ್ಹವಾಗಿದೆ. ಇಂದು ರಾಜ್ಯದಲ್ಲಿ ವೈರಸ್ ನಿಯಂತ್ರಣಕ್ಕೆ ಬರುವುದಕ್ಕೆ ಆರೋಗ್ಯ ಇಲಾಖೆ ಮತ್ತು ಮುಂಚೂಣಿ ಕಾರ್ಮಿಕರ ಸೇವೆ ನಗಣ್ಯ. ದೇಶದಲ್ಲಿ ಅತಿ ಹೆಚ್ಚು ವ್ಯಾಕ್ಸಿನೇಷನ್ ಆಗಿರುವುದು ಇಲ್ಲಿಯೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಈವರೆಗೆ 3.98 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಕಳೆದ ತಿಂಗಳು ಆಕ್ಸ್ಫರ್ಡ್ ಎಕನಾಮಿಕ್ಸ್ ಅಧ್ಯಯನವೊಂದರಲ್ಲಿ, ಇತರ ಸಣ್ಣ ರಾಜ್ಯಗಳಿಗೆ ಹೋಲಿಸಿದರೆ, ಯುಪಿ ಇನ್ನೂ ಸುರಕ್ಷಿತ ಮಟ್ಟ ತಲುಪಿಲ್ಲ. ಅಂದರೆ ಜನಸಂಖ್ಯೆಯ ಕನಿಷ್ಠ ಶೇಕಡಾ 30 ರಷ್ಟು ಮಂದಿ ಎರಡೂ ಡೋಸ್ ಲಸಿಕೆ ಪಡೆದಿಲ್ಲ ಎಂದು ವರದಿ ನೀಡಿತ್ತು.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯ ಮಾಡಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡುವುದು ನಮ್ಮ ಉದ್ದೇಶ. ಆ ಮೂಲಕ ವೈರಸ್ ನಿಯಂತ್ರಣ ಸಾಧ್ಯ ಎಂದಿದ್ದಾರೆ.
ಕನ್ವರ್ ಯಾತ್ರೆಗೆ ಅವಕಾಶ ನೀಡುವ ನಿರ್ಧಾರದ ಬಗ್ಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದ ಒಂದು ದಿನದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಆಡಳಿತಕ್ಕೆ ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದೊಡ್ಡ ಸಭೆ, ಕಾರ್ಯಕ್ರಮಗಳನ್ನು ನಡೆಸಿದರೆ, ವೈರಸ್ ಮತ್ತಷ್ಟು ವ್ಯಾಪಿಸುತ್ತದೆ ಎಂದು ಕೋರ್ಟ್ ತಿಳಿಸಿತ್ತು.
ರಾಜ್ಯ ರಾಜಕೀಯದ ಗೊಂದಲದಲ್ಲೂ ಕೋವಿಡ್ ವಿರುದ್ಧ ಉತ್ತಮವಾಗಿ ಯೋಗಿ ಆದಿತ್ಯನಾಥ್ ಕಾರ್ಯ ನಿರ್ವಹಿಸಿದ್ದಾರೆ.