ಮೈನ್‌ಪುರಿ (ಉತ್ತರ ಪ್ರದೇಶ): ಕಾರು ಅಪಘಾತದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಆಗ್ರಾ-ಲಖನೌ ಎಕ್ಸ್ಪ್ರೆಸ್ ವೇಯಲ್ಲಿ ಇಂದು ನಡೆಯಿತು. ಮೃತರನ್ನು ಪೂನಂ ತ್ಯಾಗಿ (42) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾರು ಚಾಲಕ ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೈನ್‌ಪುರಿ ಜಿಲ್ಲಾ ನ್ಯಾಯಾಲಯದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿದ್ದ ಪೂನಂ ತ್ಯಾಗಿ ರಜೆಯಲ್ಲಿದ್ದರು. ಎರಡು ದಿನಗಳ ರಜೆ ಮುಗಿಸಿ ಇಂದು ಬೆಳಗ್ಗೆ ಮೀರತ್‌ನಿಂದ ಮೈನ್‌ಪುರಿಗೆ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಮೀರತ್ ನಿವಾಸಿಯಾದ ಚಾಲಕ ಸಚಿನ್ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಆಗ್ರಾ-ಲಖನೌ ಎಕ್ಸ್ಪ್ರೆಸ್ ವೇ-65ರಲ್ಲಿ ಮುಂದೆ ಚಲಿಸುತ್ತಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಮತ್ತೊಂದು ಹಿಟ್ ಅಂಡ್ ರನ್: ಬೈಕ್ ಸವಾರ ಸಾವು, ಓರ್ವನ ಸ್ಥಿತಿ ಗಂಭೀರ
ಮಾಹಿತಿ ಪಡೆದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ, ನ್ಯಾಯಾಧೀಶೆ ಪೂನಂ ತ್ಯಾಗಿ ಮತ್ತು ಚಾಲಕನನ್ನು ಸೈಫೈ ಆಸ್ಪತ್ರೆಗೆ ರವಾನಿಸಿದ್ದಾರೆ. ಅಷ್ಟರಲ್ಲಿ ಪೂನಂ ತ್ಯಾಗಿ ಮೃತಪಟ್ಟಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಗಾಯಾಳು ಚಾಲಕನಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇಹತ್ ಕುನ್ವರ್ ರಣವಿಜಯ್ ಸಿಂಗ್ ತಿಳಿಸಿದರು.
ಪೂನಂ ತ್ಯಾಗಿ ಅವರ ಪತಿ ಕೂಡ ನ್ಯಾಯಾಧೀಶರು. ಮೀರತ್ ಕೋರ್ಟ್ನಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅಪಘಾತ ಸಂಭವಿಸುವಾಗ ಚಾಲಕ ಸಚಿನ್ ನಿದ್ರೆ ಮಂಪರಿನಲ್ಲಿದ್ದ ಎಂದು ಹೇಳಲಾಗುತ್ತಿದೆ. ಫಿರೋಜಾಬಾದ್‌ನ ನಾಗ್ಲಾ ಖಂಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟುಂಬದ ನಾಲ್ವರು ಸಾವು!: ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲೂ ಇಂದು ಇದೇ ರೀತಿಯ ರಸ್ತೆ ಅಪಘಾತ ನಡೆದಿದೆ. ಕಾರೊಂದು ಟ್ರಕ್‌ಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ. ಮೃತರನ್ನು ಧೀರೂಭಾಯಿ ಖಾಂತ್ (55), ವಸಂತಭಾಯ್ ಖಾಂತ್ (25), ಕಾಳಿದಾಸ್ ಖಾಂತ್ (40) ಮತ್ತು ಅಜಯ್ (16) ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಸಬರಕಾಂತ ಜಿಲ್ಲೆಯ ಮೊಡಸಾ ತಾಲೂಕಿನ ವೋಲ್ವೋ ಗ್ರಾಮದವರು. ರಾಜ್ಕೋಟ್ಗೆ ತೆರಳುತ್ತಿದ್ದಾಗ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ದಟ್ಟ ಮಂಜು ಕವಿದ ಕಾರಣದಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಟ್ರಕ್ ರಸ್ತೆಯಲ್ಲಿ ನಿಂತಿತ್ತೋ ಅಥವಾ ಇದ್ದಕ್ಕಿದ್ದಂತೆ ಬ್ರೇಕ್ ಹಾಕಲಾಗಿತ್ತೋ ಎಂಬುದು ಸ್ಪಷ್ಟವಾಗಿಲ್ಲ. ಈಗಾಗಲೇ ನಾಲ್ವರ ಮೃತದೇಹಗಳನ್ನು ಪೊಲೀಸರು ಸ್ಥಳೀಯರ ನೆರವಿನಿಂದ ಕಾರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಅಪಘಾತ: ಮೃತದೇಹ ಕಾರಿನಡಿ ಸಿಲುಕಿದರೂ 11 ಕಿಲೋಮೀಟರ್ ಚಲಾಯಿಸಿದ ಚಾಲಕ