ನವದೆಹಲಿ: ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಸಮಿತಿಯು ಉಗ್ರ ಸಂಘಟನೆಗಳ ಹೊಸ ಮಾರ್ಗಗಳ ಬಗ್ಗೆ ಚರ್ಚಿಸಲು ಮುಂದಾಗಿದೆ. ಭಯೋತ್ಪಾದಕರ ಇಂಟರ್ನೆಟ್ ಬಳಕೆ, ಆನ್‌ಲೈನ್ ಪಾವತಿ ಕಾರ್ಯವಿಧಾನ ಮತ್ತು ಮಾನವರಹಿತ ಡ್ರೋನ್, ವೈಮಾನಿಕ ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತಿರುವ ಕುರಿತ ಗಂಭೀರ ಚರ್ಚೆ ನಡೆಯಲಿದೆ.
ಮುಂಬೈನಲ್ಲಿ ಅಕ್ಟೋಬರ್ 28ರಂದು ಭಯೋತ್ಪಾದನಾ ನಿಗ್ರಹ ಸಮಿತಿಯ ಮೊದಲ ದಿನದ ಸಭೆ ನಡೆಯಲಿದ್ದು, ಎರಡನೇ ದಿನದ ಚರ್ಚೆಯು ನವದೆಹಲಿಯಲ್ಲಿ ನಿಗದಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆಯು ಅತ್ಯಂತ ಗಂಭೀರ ಬೆದರಿಕೆ ಒಡ್ಡಿದೆ ಎಂದು ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಮತ್ತು ವಿಶ್ವಸಂಸ್ಥೆ ಸಮಿತಿಯ ಅಧ್ಯಕ್ಷೆ ರುಚಿರಾ ಕಾಂಬೋಜ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈ ಮಾಹಿತಿ ನೀಡಿದರು. ಮುಂಬೈನಲ್ಲಿ ನಡೆಯಲಿರುವ ಸಭೆಯ ಉದ್ಘಾಟನಾ ಅಧಿವೇಶನದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮಾ ಹಾಗೂ ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆರ್ಲಿ ಮತ್ತು ಇತರ ವಿದೇಶಾಂಗ ಸಚಿವರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವಿದೇಶಾಂಗ ಸಚಿವ ಜೈಶಂಕರ್ ಕಾರ್ಯವೈಖರಿಗೆ ಯುಎಇ ಸಚಿವರ ಶ್ಲಾಘನೆ