ಝಾನ್ಸಿ( ಉತ್ತರಪ್ರದೇಶ): ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಯೋವೃದ್ಧ ವಿಜ್ಞಾನಿ ದಂಪತಿಯೊಬ್ಬರ ಮೇಲೆ ಮದ್ಯವ್ಯಸನಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಘಟನೆಯ ನಂತರ ರೈಲು ನಿಲ್ದಾಣದಲ್ಲಿ ಬಹಳ ಸಮಯದವರೆಗೆ ಗದ್ದಲ ಕೂಡಾ ನಡೆಯಿತು. ಗಲಾಟೆಯ ಬಗ್ಗೆ ಮಾಹಿತಿ ಪಡೆದ ಟಿಟಿಇ ಕುಡಿದು ರೈಲು ಹತ್ತಿದ್ದ ಪ್ರಯಾಣಿಕನನ್ನು ಹಿಡಿದು ಝಾನ್ಸಿಯ ಆರ್ಪಿಎಫ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಆರ್ಪಿಎಫ್ ಆರೋಪಿಗೆ ಜಾಮೀನು ನೀಡಿದೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನಿವೃತ್ತ ಹಿರಿಯ ವಿಜ್ಞಾನಿಯು ಬುಧವಾರ ರಾತ್ರಿ ತಮ್ಮ ಪತ್ನಿಯೊಂದಿಗೆ ಮಧ್ಯಪ್ರದೇಶದ ಹರ್ಪಾಲ್ಪುರದಿಂದ ಹಜರತ್ ನಿಜಾಮುದ್ದೀನ್ಗೆ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದರು. ಇಬ್ಬರೂ ಎಸಿ ಕೋಚ್ ಬಿ -3 ರ ಲೋವರ್ ಬೆರ್ತ್ ನ ಸೀಟ್ ಸಂಖ್ಯೆ 57 ಮತ್ತು 60 ರಲ್ಲಿ ಕುಳಿತಿದ್ದರು.
ನವದೆಹಲಿಯ ಕುತುಬ್ ಬಿಹಾರ್ ನೈಋತ್ಯ ದೆಹಲಿಯ ನಿವಾಸಿಯಾದ ರಿತೇಶ್ ಕೂಡ ಅದೇ ಬೋಗಿಯ ಸೈಡ್ ಲೋವರ್ ಬೆರ್ತ್ ಸೀಟ್ ಸಂಖ್ಯೆ 63 ರಲ್ಲಿ ಪ್ರಯಾಣಿಸುತ್ತಿದ್ದ. ಈ ವ್ಯಕ್ತಿ ಕುಡಿದು ರೈಲು ಹತ್ತಿದ್ದ ಎಂದು ಆರೋಪಿಸಲಾಗಿದೆ. ಈತ ಮಾಣಿಕ್ ಪುರದಲ್ಲಿ ಬುಧವಾರ ರಾತ್ರಿ 9:51 ರ ಸುಮಾರಿಗೆ ತನ್ನ ಸೀಟಿನಿಂದ ವೃದ್ಧ ದಂಪತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆಗ ವೃದ್ಧ ದಂಪತಿ ಪ್ರತಿಭಟಿಸಿದ್ದಾರೆ. ಈ ಸಮಯದಲ್ಲಿ ಯುವಕ ತಿರುಗಿ ದಂಪತಿಯನ್ನೇ ನಿಂದಿಸಿ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ.
ರೈಲು ಝಾನ್ಸಿ ತಲುಪಿದಾಗ ದಂಪತಿಗಳು ಟಿಟಿಇಗೆ ಈ ಬಗ್ಗೆ ಮಾಹಿತಿ ನೀಡಿದರು. ನಂತರ ಟಿಟಿಇ ಬಿಎಸ್ ಖಾನ್ ಝಾನ್ಸಿ ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ರೈಲು ಝಾನ್ಸಿ ತಲುಪಿದ ಕೂಡಲೇ ಆರ್ಪಿಎಫ್ ಪೊಲೀಸರು ಆರೋಪಿ ಯುವಕನನ್ನು ಕೆಳಗಿಳಿಸಿದರು. ಯುವಕನ ವಿರುದ್ಧ ಟಿಟಿಇ ನೀಡಿದ ದೂರಿನ ಮೇರೆಗೆ ಆರ್ಪಿಎಫ್ ರೈಲ್ವೆ ಕಾಯ್ದೆಯಡಿ ದುರ್ವರ್ತನೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದೆ.
ಯುವಕ ರೈಲಿನಲ್ಲಿಯೇ ಮದ್ಯಪಾನ ಮಾಡಲು ಆರಂಭಿಸಿದಾಗ ದಂಪತಿಯು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯವಾಗಿ ಮೊದಲಿಗೆ ವಾಗ್ವಾದ ಆರಂಭವಾಗಿತ್ತು. ನಂತರ ಇದೇ ಕಾರಣಕ್ಕೆ ಅಮಲಿನಲ್ಲಿದ್ದ ವ್ಯಕ್ತಿ ದಂಪತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆರೋಪಿ ಯುವಕ ಮದ್ಯದ ಅಮಲಿನಲ್ಲಿದ್ದ ಎಂದು ಆರ್ಪಿಎಫ್ ಕಮಾಂಡೆಂಟ್ ಅಲೋಕ್ ಕುಮಾರ್ ತಿಳಿಸಿದ್ದಾರೆ.