ದೇಶದಲ್ಲಿ ನಗರಾಭಿವೃದ್ಧಿಯ ಪ್ರಗತಿ ಕುಂಠಿತಗೊಂಡಿದೆ. ಜನರ ನಿರೀಕ್ಷೆಗಳು ಮತ್ತು ನಗರಸಭೆಗಳ ಕಾರ್ಯಕ್ಷಮತೆಯಲ್ಲಿ ಭಾರಿ ಅಂತರ ಕಾಣಿಸುತ್ತಿದೆ. ನಗರದ ಸಮಸ್ಯೆಗಳ ಕುರಿತು ಶ್ರಮಿಸುತ್ತಿರುವ ಮುಂಬೈ ಮೂಲದ ಎನ್‌ಜಿಒ ಪ್ರಜಾ ಫೌಂಡೇಶನ್, ದೇಶಾದ್ಯಂತ 40 ಮುನಿಸಿಪಾಲಿಟಿಗಳು ಮತ್ತು ಪಟ್ಟಣಗಳಲ್ಲಿ ಅಧ್ಯಯನ ನಡೆಸಿದ್ದು, ಉತ್ತಮ ಆಡಳಿತವನ್ನು ಆಧರಿಸಿ ಸೂಚ್ಯಂಕಗಳನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಒಡಿಶಾ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ, ಛತ್ತೀಸ್‌ಗಢ, ಕೇರಳ ಮತ್ತು ಮಧ್ಯಪ್ರದೇಶ ನಂತರದ ಸ್ಥಾನದಲ್ಲಿದೆ. ತೆಲುಗು ರಾಜ್ಯಗಳ ಪೈಕಿ ಆಂಧ್ರ ಪ್ರದೇಶ 16 ಮತ್ತು ತೆಲಂಗಾಣ 19ನೇ ಸ್ಥಾನದಲ್ಲಿದೆ.
ಮುನಿಸಿಪಾಲಿಟಿಯಲ್ಲಿನ ಸದಸ್ಯರ ಕಾರ್ಯಕ್ಷಮತೆ, ಶಾಸಕಾಂಗ ವ್ಯವಸ್ಥೆಯು ಅನುಸರಿಸುವ ನೀತಿಗಳು, ನಾಗರಿಕರ ಸಹಭಾಗಿತ್ವ, ಸಮಸ್ಯೆ ಪರಿಹಾರಕ್ಕೆ ರೂಪಿಸಿರುವ ವ್ಯವಸ್ಥೆ ಮತ್ತು ಆರ್ಥಿಕ ವಿಕೇಂದ್ರೀಕರಣದ ಅಂಶಗಳನ್ನು ಆಧರಿಸಿ ಸೂಚ್ಯಂಕದಲ್ಲಿ ರಾಜ್ಯಗಳ ಸ್ಥಾನಮಾನವನ್ನು ನಿಗದಿಸಲಾಗಿದೆ. ನೂರು ಅಂಕಗಳಲ್ಲಿ ಯಾವ ರಾಜ್ಯವೂ 60 ಅಂಕವನ್ನೂ ತಲುಪಿಲ್ಲ ಎಂಬುದು ಅತ್ಯಂತ ಗಮನಾರ್ಹ. ಇದು ದೇಶದಲ್ಲಿ ಮುನಿಸಿಪಾಲಿಟಿಗಳ ಆಡಳಿತದಲ್ಲಿನ ಕೊರತೆ ಮತ್ತು ನಾಗರಿಕ ಸೇವೆ ವ್ಯವಸ್ಥೆಯಲ್ಲಿ ವೈಫಲ್ಯಗಳನ್ನು ನಮ್ಮೆದುರು ಬಿಚ್ಚಿಡುತ್ತಿವೆ. 74ನೇ ತಿದ್ದುಪಡಿಯ 12ನೇ ಶೆಡ್ಯೂಲ್‌ನಲ್ಲಿ ಶಿಫಾರಸು ಮಾಡಿದ 18 ಅಂಶಗಳನ್ನು ಯಾವ ಮುನಿಸಿಪಾಲಿಟಿಯೂ ಸಂಪೂರ್ಣವಾಗಿ ಅನುಷ್ಠಾನಗೊಳಿಸಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.
ಮುನಿಸಿಪಾಲಿಟಿಗಳು ಸಮಸ್ಯೆಗಳ ಆಡುಂಬೊಲ:
ಸಂವಿಧಾನದಲ್ಲಿ ವಿವರಿಸಿದ ರೀತಿಯಲ್ಲಿ ಮುನಿಸಿಪಾಲಿಟಿಗಳು ಸ್ವಾಯತ್ತತೆ ಅನುಭವಿಸುತ್ತಿಲ್ಲ. 74ನೇ ಸಂವಿಧಾನ ತಿದ್ದುಪಡಿಯ ಮೂಲ ಧ್ಯೇಯವನ್ನು ರಾಜ್ಯ ಸರ್ಕಾರಗಳು ಪದೇ ಪದೆ ಉಲ್ಲಂಘಿಸುತ್ತಲೇ ಇವೆ. ಮುನಿಸಿಪಾಲಿಟಿಯ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಹಲವು ಅಧಿಕಾರಗಳನ್ನು ತಮ್ಮ ಬಳಿ ಇಟ್ಟುಕೊಂಡಿವೆ. ರಾಜ್ಯ ಸರ್ಕಾರ ಮತ್ತು ಮುನಿಸಿಪಾಲಿಟಿಯ ಮಧ್ಯೆ ಹಣದ ಹಂಚಿಕೆಯು ವೈಜ್ಞಾನಿಕವಾಗಿ ನಡೆಯಬೇಕು ಎಂದು ಸಂವಿಧಾನ ಸ್ಪಷ್ಟೀಕರಿಸುತ್ತದೆ. ರಾಜ್ಯ ಹಣಕಾಸು ಆಯೋಗದ ಮೇಲ್ವಿಚಾರಣೆಯಲ್ಲಿ ಈ ಇಡೀ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಸಂವಿಧಾನ ನಿರ್ದೇಶಿಸುತ್ತದೆ. ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡುವುದು ಮತ್ತು ಕೆಲವು ವಿಭಾಗಗಳನ್ನು ಹೊರಗಿಡುವಂತಹ ಕ್ರಮಗಳನ್ನು ರಾಜಕೀಯ ಅಗತ್ಯಕ್ಕೆ ಅನುಗುಣವಾಗಿ ಮಾಡುತ್ತವೆ. ಇದು ಮುನಿಸಿಪಾಲಿಟಿಯ ಆದಾಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿದೆ. ನೀರು ಪೂರೈಕೆ, ಬೀದಿ ದೀಪ, ನೈರ್ಮಲ್ಯ, ರಸ್ತೆಗಳು, ಸಾರಿಗೆ ಮತ್ತು ಘನ ತ್ಯಾಜ್ಯ ನಿರ್ವಹಣೆಯಂತಹ ಪ್ರಾಥಮಿಕ ಕಾರ್ಯಗಳನ್ನೂ ಸಂಪೂರ್ಣವಾಗಿ ಮತ್ತು ಸಂತೃಪ್ತಿಕರವಾಗಿ ಮಾಡಲು ಮುನಿಸಿಪಾಲಿಟಿಗಳಿಗೆ ಸಾಧ್ಯವಾಗುತ್ತಿಲ್ಲ.
ಕೊಳಗೇರಿಗಳು ದಿನದಿಂದ ದಿನಕ್ಕೆ ವಿಸ್ತರಿಸುವುದು ಇನ್ನೊಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಸಂವಿಧಾನದಲ್ಲಿ ನಿರ್ದೇಶಿಸಿದ ಜವಾಬ್ದಾರಿಗಳು ಒಂದೊಂದಾಗಿ ಮುನಿಸಿಪಾಲಿಟಿಯ ಕೈಯಿಂದ ಜಾರುತ್ತಿದೆ. ರಾಜ್ಯ ಸರ್ಕಾರವು ಸ್ಥಾಪಿಸಿದ ಒಳಚರಂಡಿ ಮಂಡಳಿ, ಜಲ ಮಂಡಳಿ ಮತ್ತು ನಗರಾಭಿವೃದ್ಧಿ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳು ಮುನಿಸಿಪಾಲಿಟಿ ನಡೆಸಬೇಕಿರುವ ಕೆಲಸಗಳನ್ನು ಮಾಡುತ್ತಿವೆ. ಆಂಧ್ರಪ್ರದೇಶ ಮುನಿಸಿಪಾಲಿಟಿ ಏಳು ಕಾರ್ಯಗಳನ್ನು ನಡೆಸುತ್ತಿದ್ದರೆ, ತೆಲಂಗಾಣ ಮುನಿಸಿಪಾಲಿಟಿ ನಾಲ್ಕು ಕಾರ್ಯಗಳನ್ನು ನಡೆಸುತ್ತಿದೆ. ಪ್ರಜಾಪ್ರಭುತ್ವದ ಆಡಳಿತದಲ್ಲಿ ಮೂರನೇ ಹಂತದ ಈ ಮಂಡಳಿಗಳು ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿವೆ.
ಮುನಿಸಿಪಾಲಿಟಿಗಳಿಗೆ ಆಯ್ಕೆಯಾದ ಕಾರ್ಪೊರೇಟರ್ಗಳು ಮತ್ತು ಮೇಯರ್ಗಳು ಸೀಮಿತ ಅಧಿಕಾರ ಹೊಂದಿದ್ದಾರೆ. ಸಂಪೂರ್ಣ ಆಡಳಿತ ಅಧಿಕಾರವು ಕಮಿಷನರ್ ಬಳಿ ಇರುತ್ತದೆ. ನಗರಾಡಳಿತದಲ್ಲಿ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯು ಅತ್ಯಂತ ನಿರ್ಣಾಯಕವಾಗಿದೆ. ಆದರೆ, ಇನ್ನೊಂದೆಡೆ ಮುನಿಸಿಪಾಲಿಟಿಯ ಆಡಳಿತದಲ್ಲಿ ಜನರ ಆಸಕ್ತಿ ನಿರಂತರವಾಗಿ ಕುಸಿಯುತ್ತಲೇ ಇದೆ ಎಂಬುದನ್ನು ನಾವು ಗಮನಿಸಬೇಕು. ಮುನಿಸಿಪಲ್ ಚುನಾವಣೆಯಲ್ಲಿ ಮತದಾನದ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ. ವಾರ್ಡ್ ಸಮಿತಿಗಳನ್ನು ಸ್ಥಾಪಿಸಿದರೆ, ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ. ಆದರೆ ಹಲವು ಮುನಿಸಿಪಾಲಿಟಿಗಳಲ್ಲಿ ವಾರ್ಡ್ ಕಮಿಟಿಗಳೇ ಇಲ್ಲ. ನಗರಾಡಳಿತದಲ್ಲಿ ಇನ್ನೊಂದು ಪ್ರಮುಖ ಅಂಶವೆಂದರೆ, ದೂರು ನಿರ್ವಹಣೆ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ.
ಹಣಕಾಸು ಮತ್ತು ಕಾರ್ಯನಿರ್ವಹಣೆಯು ಅತ್ಯಂತ ನಿರ್ಣಾಯಕ:
ಉತ್ತಮ ನಗರಾಡಳಿತಕ್ಕೆ ಕುಶಲ ಮಾನವ ಸಂಪನ್ಮೂಲದ ಕೊರತೆಯೇ ಮುಖ್ಯ ಕಾರಣವಾಗಿದೆ. ಹಲವು ಮುನಿಸಿಪಾಲಿಟಿಗಳಲ್ಲಿ ಮಂಜೂರಾದ ಹುದ್ದೆಗಳಿಗೆ ನೇಮಕಾತಿ ಮಾಡಲಿಲ್ಲ. ಉದ್ಯೋಗಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲೂ ಮುನಿಸಿಪಾಲಿಟಿಗಳಿಗೆ ಸ್ವಾತಂತ್ರ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಮೂರನೇ ಅಂಗ ಎಂದು ಕರೆಯಲಾಗುವ ಮುನಿಸಿಪಾಲಿಟಿಗಳು, ಉತ್ತಮ ಆಡಳಿತವನ್ನು ನೀಡಲು ಸಂಪೂರ್ಣ ಸ್ವಾಯತ್ತತೆಯನ್ನು ಹೊಂದಿರಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳಲು ಅವುಗಳಿಗೆ ಸ್ವಾತಂತ್ರ್ಯ ನೀಡಬೇಕು. ಸಂವಿಧಾನಕ್ಕೆ ಹನ್ನೆರಡನೇ ಶೆಡ್ಯೂಲ್‌ನಲ್ಲಿ ಉಲ್ಲೇಖಿಸಿದ 18 ಕಾರ್ಯಗಳ ಮೇಲೆ ಮುನಿಸಿಪಲ್ ಆಡಳಿತವು ಸಂಪೂರ್ಣ ಅಧಿಕಾರ ಹೊಂದಿರಬೇಕು.
ನಗರಾಡಳಿತದಲ್ಲಿ ಚುನಾಯಿತ ವ್ಯಕ್ತಿಗಳಿಗೆ ಉತ್ತಮ ತರಬೇತಿಯನ್ನು ಒದಗಿಸಬೇಕಿದೆ. ಹುದ್ದೆಗಳಿಗೆ ನೇಮಕಾತಿಯಲ್ಲಿ ಮುನಿಸಿಪಾಲಿಟಿಗಳಿಗೆ ಸಂಪೂರ್ಣ ಅಧಿಕಾರನ್ನು ನೀಡಬೇಕಿದೆ. ಮೇಯರ್ ಮತ್ತು ಕೌನ್ಸಿಲರ್‌ರನ್ನು ವಾಪಸ್ ಕರೆಸಿಕೊಳ್ಳುವ ಹಕ್ಕು ನಾಗರಿಕರಿಗೆ ಇರಬೇಕು. ರಾಜ್ಯಗಳಿಗೆ ಕೇಂದ್ರ ಸರ್ಕಾರವು ತೆರಿಗೆ ನೀಡುವ ರೀತಿಯಲ್ಲೇ ರಾಜ್ಯಗಳು ನಗರಸಭೆಗಳಿಗೆ ತೆರಿಗೆಯಲ್ಲಿ ಪಾಲು ನೀಡಬೇಕು. ಆಗ ಮಾತ್ರ ನಗರಸಭೆಗಳ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿರುತ್ತದೆ. ಸ್ವತ್ತಿನ ತೆರಿಗೆಯ ಮೇಲೆ ಮುನಿಸಿಪಾಲಿಟಿಗಳು ಸಂಪೂರ್ಣ ಅಧಿಕಾರವನ್ನು ಹೊಂದಿರಬೇಕು ಮತ್ತು ಬಳಕೆದಾರರ ಶುಲ್ಕಗಳು ಮತ್ತು ತಿದ್ದುಪಡಿಗಳನ್ನು ಅವು ಕಾಲಕಾಲಕ್ಕೆ ಹೆಚ್ಚಳ ಮಾಡುತ್ತಿರಬೇಕು. ನಗರಾಡಳಿತದ ಎಲ್ಲಾ ವಲಯಗಳಲ್ಲಿ ದಕ್ಷತೆಯನ್ನು ಇ-ಆಡಳಿತವು ನೀಡಬಲ್ಲದು. ಇದರಿಂದ ದಕ್ಷ ನಾಗರಿಕ ಸೇವೆಗಳು, ಪಾರದರ್ಶಕತೆ ಮತ್ತು ತ್ವರಿತ ಮಾಹಿತಿಯನ್ನು ನಾಗರಿಕರಿಗೆ ಒದಗಿಸಲು ಸಾಧ್ಯವಾಗುತ್ತದೆ. ನಗರಾಡಳಿತ ಮತ್ತು ಉತ್ತಮ ಅಭಿವೃದ್ಧಿಗೆ ಇದು ನೇರವಾಗಿ ಸಂಪರ್ಕ ಹೊಂದಿದೆ. ಈ ನಿಟ್ಟಿನಲ್ಲಿ ಉತ್ತಮ ನಿರ್ಧಾರಗಳನ್ನು ಮಾಡಿದಾಗ ಮಾತ್ರ, ಮುನಿಸಿಪಾಲಿಟಿಗಳು ಮತ್ತು ಪಟ್ಟಣಗಳು ಪ್ರಗತಿ ಕಾಣುತ್ತವೆ.
-ಪುಲ್ಲೂರು ಸುಧಾಕರ
ನಗರಾಭಿವೃದ್ಧಿ ವ್ಯವಹಾರಗಳ ಪರಿಣತರು