ಲಖನೌ(ಉತ್ತರಪ್ರದೇಶ) : ಯುಪಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ದೆಹಲಿಯ ಪಕ್ಷದ ಪ್ರಧಾನ ಕಚೇರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಲಿದ್ದಾರೆ.
ಉತ್ತರಪ್ರದೇಶ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪಕ್ಷದೊಳಗಿನ ಆಂತರಿಕ ಕಚ್ಚಾಟವೇ ಪ್ರಮುಖ ಕಾರಣ ಎಂದು ಕಾಂಗ್ರೆಸ್ಸಿಗರು ತಮ್ಮ ನಾಯಕರಿಗೆ ಹೇಳಲು ಮುಂದಾಗಿದ್ದಾರೆ.
ಇಲ್ಲಿಗೆ ಎಲ್ಲವೂ ಮುಗಿದಿಲ್ಲ ಎಂಬುದನ್ನು ನಾವು ನಮ್ಮ ನಾಯಕರಿಗೆ ತಿಳಿಸಲು ಬಯಸುತ್ತೇವೆ ಮತ್ತು ಉತ್ತರಪ್ರದೇಶವನ್ನು ಮುನ್ನಡೆಸಲು ಉತ್ತಮವಾದವರನ್ನು ಆಯ್ಕೆ ಮಾಡಿದರೆ ಮಾತ್ರ 2024ರ ಲೋಕಸಭಾ ಚುನಾವಣೆ ಬಗ್ಗೆ ನಾವು ಭರವಸೆ ಇಟ್ಟುಕೊಳ್ಳಬಹುದು.
ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಡಿಎನ್‌ಎ ಅನ್ನೇ ಹೊಂದಿರದ ಕೂಟವು ದಾರಿ ತಪ್ಪಿಸಲಾಗಿದೆ. ಅವು ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿವೆ ಎಂದು ಪ್ರಚಾರದ ನೇತೃತ್ವವಹಿಸಿರುವ ಉಚ್ಛಾಟಿತ ಕಾಂಗ್ರೆಸ್ ನಾಯಕ ಕೋನಾರ್ಕ್ ದೀಕ್ಷಿತ್ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ 385 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿರುವುದು ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿರುವ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ. ಸಾರ್ವತ್ರಿಕ ಚುನಾವಣೆಗೆ ಮುನ್ನ ಪಕ್ಷವನ್ನು ಪುನರುಜ್ಜೀವನಗೊಳಿಸಬೇಕಾದರೆ ನಾವು ಕೆಲಸ ಮಾಡುವ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ನಾವು ಬಂಡಾಯ ಎದ್ದಿಲ್ಲ. ಆದರೆ, ಕೆಲವು ವಿಷಯಗಳ ಬಗ್ಗೆ ಪಕ್ಷದ ನಾಯಕತ್ವದೊಂದಿಗೆ ಚರ್ಚಿಸಬೇಕಾಗಿದೆ ಎಂದರು.
ಚುನಾವಣೆಯಲ್ಲಿ ಸೋತಿರುವ ಅಜಯ್ ಕುಮಾರ್ ಲಲ್ಲು ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಈ ಮೂಲಕ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.
ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಸಂಪುಟ ರಚನೆ ಕಸರತ್ತು: ಹೈಕಮಾಂಡ್ ಭೇಟಿಯಾಗಲಿರುವ ಸಿಎಂ ಯೋಗಿ