ಲಖನೌ: ಉತ್ತರ ಪ್ರದೇಶದಲ್ಲಿ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚುತ್ತಿವೆ. ರೋಗ ನಿಯಂತ್ರಣಕ್ಕಾಗಿ ಸರ್ಕಾರವು ರಾಜ್ಯಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ ಪೂರ್ಣ ತೋಳಿನ ಶರ್ಟ್ ಮತ್ತು ಪ್ಯಾಂಟ್ ಧರಿಸುವಂತೆ ಸೂಚಿಸಿದೆ. ವಿದ್ಯಾರ್ಥಿಗಳನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಧ್ಯಮಿಕ ಶಿಕ್ಷಣ ಇಲಾಖೆಯು ಎಲ್ಲಾ ಜಿಲ್ಲಾ ಶಾಲಾ ನಿರೀಕ್ಷಕರಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಮಹೇಂದ್ರ ದೇವ್ ಮಾತನಾಡಿ, 'ಈ ರೋಗಗಳಿಂದ ವಿದ್ಯಾರ್ಥಿಗಳನ್ನು ಪಾರು ಮಾಡಲು ಶಾಲೆಗಳ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅರಿವು ಮೂಡಿಸುವುದು ಅಗತ್ಯ. ವಿದ್ಯಾರ್ಥಿಗಳು ಪೂರ್ಣ ಅಂಗಿ ಮತ್ತು ಪ್ಯಾಂಟ್ ಧರಿಸಿ ಶಾಲೆಗೆ ಬರುವಂತೆ ನಿರ್ದೇಶಿಸಲಾಗಿದೆ. ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಮತ್ತು ಅವುಗಳಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ದೈನಂದಿನ ಪ್ರಾರ್ಥನೆ ಸಭೆಯಲ್ಲಿ ಕಡ್ಡಾಯವಾಗಿ ತಿಳಿಸಿಕೊಡಲಾಗುತ್ತದೆ' ಎಂದರು.
ಕಳೆದ ಕೆಲವು ವಾರಗಳಲ್ಲಿ ಡೆಂಗ್ಯೂ ಮತ್ತು ಇತರ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಹೆಚ್ಚಿವೆ. ಸೊಳ್ಳೆಗಳಿಂದ ಹರಡುವ ರೋಗಗಳನ್ನು ಪರೀಕ್ಷಿಸಲು ಕೈಗೊಂಡ ಹಲವು ಕ್ರಮಗಳ ಹೊರತಾಗಿಯೂ ಲಕ್ನೋದಲ್ಲಿ ಭಾನುವಾರ 36 ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಮನೆಗಳ ಆವರಣದಲ್ಲಿ ಸೊಳ್ಳೆ ಲಾರ್ವಾ ಕಂಡು ಬಂದ ಹಿನ್ನೆಲೆಯಲ್ಲಿ ಆರು ಮನೆ ಮಾಲೀಕರಿಗೆ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ನಗದುರಹಿತ ವೈದ್ಯಕೀಯ ಸೇವೆ ಅಂದುಕೊಂಡಷ್ಟು ಸುಲಭವಲ್ಲ: ಈ ಟಿಪ್ಸ್ ಪಾಲಿಸಿ..