ಗೊಂಡಾ (ಉತ್ತರಪ್ರದೇಶ): ಗೊಂಡಾ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಮತದಾನ ನಡೆಯುವ ಕೆಲವೇ ಗಂಟೆಗಳ ಮೊದಲು, ಸಮಾಜವಾದಿ ಪಕ್ಷದ ಅಭ್ಯರ್ಥಿ, ಅವರ ಸಹೋದರರು ಮತ್ತು ಬೆಂಬಲಿಗರ ವಿರುದ್ಧ ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಥಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಶನಿವಾರ ರಾತ್ರಿ ಮಹಿಳೆಯ ಮನೆಗೆ ನುಗ್ಗಿ ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಆಕೆಯ ಮತ್ತು ಆಕೆಯ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಎಸ್‌ಪಿ ಅಭ್ಯರ್ಥಿ ಯೋಗೇಶ್ ಪ್ರತಾಪ್ ಸಿಂಗ್ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ತನ್ನ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು. ಈ ವೇಳೆ ಸಿಂಗ್, ಅವರ ಇಬ್ಬರು ಸಹೋದರರು ಮತ್ತು ಬೆಂಬಲಿಗರು ಆಕೆಯ ಮನೆಗೆ ನುಗ್ಗಿ ಜಗಳವಾಡಿದರು. ಆಕೆಯ ಕುಟುಂಬಸ್ಥರು ವಿರೋಧಿಸಿದಾಗ ಥಳಿಸಿದ್ದಾರೆ. ಅಲ್ಲದೇ ಗುಂಡು ಹಾರಿಸಿ ಮಹಿಳೆಯ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕೇಂದ್ರ ಸಚಿವ ನಾರಾಯಣ ರಾಣೆ, ಪುತ್ರ ನಿತೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ.. ಕಾರಣ?
ಬಿಜೆಪಿಗೆ ಮತ ಹಾಕುವುದು ದುಬಾರಿ ಎಂದು ಸಿಂಗ್ ಬೆಂಬಲಿಗರು ಮಹಿಳೆಗೆ ಹೇಳಿದ್ದಾರೆ ಎನ್ನಲಾಗ್ತಿದೆ. ಬಳಿಕ ಆಕೆಯನ್ನು ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮಿಶ್ರಾ ವಿವರಿಸಿದ್ದಾರೆ.
ಯೋಗೇಶ್ ಸಿಂಗ್ ಮತ್ತು ಅವರ ಬೆಂಬಲಿಗರ ಮೇಲೆ ನಿಗಾ ಇಡಲು ಅವರ ನಿವಾಸಗಳ ಹೊರಗೆ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಸಿಂಗ್ ಅವರಿಗೆ ಭದ್ರತೆ ಒದಗಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.