ಲಕ್ನೋ (ಉತ್ತರ ಪ್ರದೇಶ): ಇಲ್ಲಿನ ಕ್ಯಾಂಟ್ ಪ್ರದೇಶದಲ್ಲಿ ಶಾಲೆಯಿಂದ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಬೆನ್ನಟ್ಟಿ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದಡಿ ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ಸಾದತ್ ಅಲಿ ಎಂಬಾತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಶೀಘ್ರದಲ್ಲೇ ಕೆಲಸದಿಂದಲೂ ವಜಾಗೊಳಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಆರೋಪಿ ಕಾನ್‌ಸ್ಟೇಬಲ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಜೈಲಿಗೆ ಕಳುಹಿಸಲಾಗಿದೆ.
ಕ್ಯಾಂಟ್ ಇನ್ಸ್‌ಪೆಕ್ಟರ್ ರಾಜ್‌ಕುಮಾರ್ ನೀಡಿರುವ ಮಾಹಿತಿ ಪ್ರಕಾರ, ಕಾನ್‌ಸ್ಟೇಬಲ್ ಸಾದತ್ ಅಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿರುವ ವಿಡಿಯೋ ಮಂಗಳವಾರ ವೈರಲ್ ಆಗಿದೆ. ವಿಡಿಯೋದಲ್ಲಿ ಶಾಲೆಯಿಂದ ವಾಪಸಾಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದು ಸ್ಪಷ್ಟವಾಗಿದೆ. ಸಂತ್ರಸ್ತ ವಿದ್ಯಾರ್ಥಿನಿಯ ತಾಯಿ ಆರೋಪಿ ಕಾನ್‌ಸ್ಟೇಬಲ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಡಿಸಿಪಿ ಹೃದಯೇಶ್ ಕುಮಾರ್, ಸಾದತ್ ಅಲಿಯನ್ನು ಅಮಾನತುಗೊಳಿಸಿದ್ದಾರೆ. ಬಂಧಿತರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಕೆಲಸದಿಂದ ವಜಾಗೊಳಿಸಲು ಸಿದ್ಧತೆ ನಡೆಸಲಾಗಿದೆ. ವಿಡಿಯೋ ಆಧಾರದ ಮೇಲೆ ಚರ್ಚಿಸಲಾಗುತ್ತಿದೆ ಎಂದು ಇನ್ಸ್‌ಪೆಕ್ಟರ್ ಹೇಳಿದರು. ಬಂಧಿತ ಕಾನ್‌ಸ್ಟೇಬಲ್ ಇತರೆ ಕೆಲವು ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಕೊಡುವಂತೆ ಪೀಡಿಸಿದ್ದ ಎಂಬ ಅಂಶವೂ ಬಯಲಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬುಧವಾರ ಮೋಹನ್‌ಲಾಲ್‌ಗಂಜ್‌ನಿಂದ ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದ ಸಾದತ್ ಅಲಿ, ಕ್ಯಾಂಟ್‌ನಲ್ಲಿ ಶಾಲೆಯಿಂದ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಕಿರುಕುಳ ನೀಡಿದ್ದಾನೆ. ಘಟನೆಯ ಎಲ್ಲ ದೃಶ್ಯವನ್ನು ಮಹಿಳೆಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಗಮನಸಿದ ಯುಪಿ ಪೊಲೀಸರು ಸಾದತ್ ಅಲಿಯನ್ನು ಹುದ್ದೆಯಿಂದ ಅಮಾನತು ಮಾಡಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಪರಿಸ್ಥಿತಿ ನಿಯಂತ್ರಣದಲ್ಲಿದೆ- ಭಾರತೀಯ ಸೇನೆ