ಮೀರತ್ (ಉತ್ತರ ಪ್ರದೇಶ) : ಕೊಲೆ ಪ್ರಕರಣದ ಅಪರಾಧಿಯಾಗಿ ಜೈಲುವಾಸದ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ 2004 ರಲ್ಲಿ ಪೆರೋಲ್ ಮೇಲೆ ಜೈಲಿನಿಂದ ಹೊರಬಂದು ತಾನು ಮರಣ ಹೊಂದಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ತಲೆಮರೆಸಿಕೊಂಡಿದ್ದ. ಆದರೆ ಈಗ ಆತನನ್ನು ಬುಲಂದ್‌ಶಹರ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬುಲಂದ್‌ಶಹರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸಂತೋಷ್ ಕುಮಾರ್ ಸಿಂಗ್, ಕೊಲೆ ಆರೋಪಿ ಅನಿರಾಜ್ ಸಿಂಗ್ 2004 ರಲ್ಲಿ ಪೆರೋಲ್ ಮೇಲೆ ಜೈಲಿನಿಂದ ಹೊರಬಂದು, ನಕಲಿ ದಾಖಲೆ ಸೃಷ್ಟಿಸಿ ತನ್ನ ನೈಜ ಗುರುತನ್ನ ಮರೆಮಾಚುವ ಮೂಲಕ ಬೇರೆ ಸ್ಥಳದಲ್ಲಿ ವಾಸಿಸುತ್ತಿದ್ದ. ಗುಪ್ತಚರ ಇಲಾಖೆಯ ಮೂಲಕ ಮಾಹಿತಿ ಸಂಗ್ರಹಿಸಿ ಅವನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
"ಅನಿರಾಜ್ ಸಿಂಗ್ ಮೀರತ್‌ನ ಸರ್ಧಾನಾ ಮೂಲದವನಾಗಿದ್ದು, ಇವನನ್ನು 1988 ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿತ್ತು. ಈತ 2004 ರಲ್ಲಿ ಪೆರೋಲ್‌ನಲ್ಲಿ ಹೊರಬಂದಿದ್ದ. ಜೈಲಿನಿಂದ ಹೊರಬಂದ ಮೇಲೆ ಅನಿರಾಜ್ ಸಿಂಗ್ ಕೆಲವು ನಕಲಿ ದಾಖಲೆ ಸೃಷ್ಟಿಸಿ ತಾನು ಸತ್ತಿರುವುದಾಗಿ ಘೋಷಿಸಿದ್ದ. ಕಳೆದ 16 ವರ್ಷಗಳಿಂದ ಈತ ತನ್ನ ಗುರುತು ಮರೆಮಾಚುವ ಮೂಲಕ ಬೇರೆ ಸ್ಥಳದಲ್ಲಿ ವಾಸಿಸುತ್ತಿದ್ದ." ಎಂದು ಸಂತೋಷ್ ಕುಮಾರ್ ಸಿಂಗ್ ತಿಳಿಸಿದರು.
ಓದಿ : ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋ ನೋಡಿ 6ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 12ರ ಬಾಲಕ!
"ಕಳೆದ ವರ್ಷ, ಮೀರತ್ ಪೊಲೀಸರಿಗೆ ಈತ ಬದುಕಿದ್ದಾನೆ ಎಂಬ ಮಾಹಿತಿ ತಿಳಿದಿತ್ತು. ಹೀಗಾಗಿ ಇವನ ಬಗ್ಗೆ ಮಾಹಿತಿ ನೀಡಿದವರಿಗೆ 20,000 ರೂ. ಬಹುಮಾನ ಘೋಷಿಸಿದ್ದರು. ಸದ್ಯ ಈತನನ್ನು ಬಂಧಿಸಲಾಗಿದ್ದು, ಬಂಧನದ ವೇಳೆ ಈತನ ಬಳಿಯಿಂದ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಇವನನ್ನ ಜೈಲಿಗೆ ಅಟ್ಟಿದ್ದಾರೆ. ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅನಿರಾಜ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.