ಲಕ್ನೋ: ಡೆಸ್ಟಿನೇಷನ್ ವೆಡ್ಡಿಂಗ್ (ಜನಪ್ರಿಯ ಮದುವೆ ತಾಣ) ಎಂಬುದು ಇಂದು ಪ್ರಖ್ಯಾತಿ ಪಡೆಯುತ್ತಿದೆ. ಕೇವಲ ಸೆಲಿಬ್ರಿಟಿಗಳು ಮಾತ್ರವಲ್ಲ, ಜನಸಾಮಾನ್ಯರು ಕೂಡ ಇಂತಹ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲಾನ್ ಮಾಡುತ್ತಿದ್ದಾರೆ. ಐತಿಹಾಸಿಕ ಕಟ್ಟಡ, ಪರಂಪರೆಗಳ ಸ್ಥಳದಲ್ಲಿ ಅದ್ದೂರಿಯಾಗಿ ನಡೆಯುವ ಈ ಮದುವೆ ಅನೇಕರಿಗೆ ಒಂದು ರೀತಿ ಕನಸಿನ ಮದುವೆ ಎಂದರೆ ತಪ್ಪಾಗದು. ಸದ್ಯ ಭಾರತದಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ಡೆಸ್ಟಿನೇಷನ್ ವೆಡ್ಡಿಂಗ್ನಿಂದ ಅನೇಕ ಮಂದಿ ಜೀವನೋಪಾಯ ಕಂಡುಕೊಂಡಿದ್ದು, ಇದರಿಂದ ಸರ್ಕಾರಕ್ಕೂ ಭರಪೂರ ಆದಾಯ ಬರುತ್ತಿದೆ.
ಸದ್ಯ ಭಾರತದಲ್ಲಿ ಬಹುತೇಕರ ಡೆಸ್ಟಿನೇಷನ್ ವೆಡ್ಡಿಂಗ್ ಸ್ಥಳದಲ್ಲಿ ರಾಜಸ್ಥಾನದ ಜೈಪುರ ಪ್ರಮುಖ ಸಾಲಿನಲ್ಲಿದೆ. ಇಲ್ಲಿನ ಐತಿಹಾಸಿಕ ಕಟ್ಟಡಗಳಲ್ಲಿ ನಡೆಯುವ ವೈಭಪೋಪೇತ ಮದುವೆಯಿಂದ ಪ್ರವಾಸೋದ್ಯಮ ಕೂಡ ಸಾಕಷ್ಟು ಅಭಿವೃದ್ದಿಯಾಗುತ್ತದೆ. ಇದೇ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಹೆಜ್ಜೆ ಇಟ್ಟಿದೆ. ರಾಜ್ಯವನ್ನು ಜಾಗತಿಕ ಮದುವೆ ತಾಣವಾಗಿಸುವ ಗುರಿಯನ್ನು ಯುಪಿ ಸರ್ಕಾರ ಹೊಂದಿದೆ. ಇದಕ್ಕಾಗಿ ಬುದ್ದ ನಗರದಲ್ಲಿ ಮೂರು ದಿನಗಳ ಕಾಲ ನಡೆದ ಗ್ಲೋಬಲ್ ಡೆಸ್ಟಿನೇಷನ್ ಎಕ್ಸ್ಪೊ ಮತ್ತು ಕಾನ್ಫರೆನ್ಸ್ (ಜಿಡಿಇಸಿ)ಯ ಎರಡನೇ ಆವೃತ್ತಿ ಸಭೆಯಲ್ಲಿ ಪ್ರವಾಸೋದ್ಯಮ ಅಧಿಕಾರಿಗಳು ಭಾಗಿಯಾಗಿದ್ದರು.
ಈ ಕುರಿತು ಮಾತನಾಡಿರುವ ರಾಜ್ಯ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್, ಉತ್ತರ ಪ್ರದೇಶವನ್ನು ಜಾಗತಿಕವಾಗಿ ಅಚ್ಚುಮೆಚ್ಚಿನ ಪ್ರವಾಸತಾಣವಾಗಿ ರೂಪಿಸುವುದು ನಮ್ಮ ಗುರಿ. ಇಲ್ಲಿನ ಎಲ್ಲ ಸ್ಥಳಗಳು ರಾಜ್ಯದ ವೈಭವವನ್ನು ಜಗತ್ತಿಗೆ ಪ್ರದರ್ಶಿಸುತ್ತವೆ ಎಂದರು.
ಟ್ರಿಲಿಯನ್ ಡಾಲರ್ ಆದಾಯ ನಿರೀಕ್ಷೆ: ರಾಜ್ಯವನ್ನು ಗ್ಲೋಬಲ್ ವೆಡ್ಡಿಂಗ್ ಡೆಸ್ಟಿನೇಷನ್ ಮಾಡುವ ಮೂಲಕ ರಾಜ್ಯ ಸರ್ಕಾರ 2027ರ ಹೊತ್ತಿಗೆ ಪ್ರವಾಸೋದ್ಯಮ ನಿಯಮದ ಮೂಲಕ ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಎದುರು ನೋಡುತ್ತಿದೆ. ಇಲ್ಲಿನ ಸಾಂಸ್ಕೃತಿಕ ಪರಂಪರೆ ಮತ್ತು ರಾಜವೈಭೋಗದ ಮೂಲಕ ಜನರು ತಮ್ಮ ಮದುವೆಯನ್ನು ಸ್ಮರಣೀಯವಾಗಿಸಬಹುದು ಎಂದು ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪ್ರಧಾನ ಕಾರ್ಯದರ್ಶಿ ಮುಖೇಶ್ ಕುಮಾರ್ ಹೇಳಿದರು.
100 ಸ್ಥಳಗಳ ಗುರುತು: ಉತ್ತರ ಪ್ರದೇಶವು ತಾಜ್‌ಮಹಲ್, ಬಾಜಿರಾವ್ ಮಸ್ತಾನಿಯ ಪ್ರೀತಿಯ ಕುರುಹಾದ ಮಸ್ತಾನಿ ಮಹಲ್, ಬುಂದೇಲ್ ಖಂಡ್ ಅರಮನೆ, ಚುಹಾನ್ ಕೋಟೆಯಂತಹ ಅನೇಕ ಐತಿಹಾಸಿಕ ಆಕರ್ಷಕ ಸ್ಥಳಗಳಿಂದ ಕೂಡಿದೆ. ಇವುಗಳನ್ನು ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಬಳಸಿಕೊಳ್ಳಬಹುದಾಗಿದೆ. ಮತ್ತೊಂದೆಡೆ, ಮಧುರಾ- ಬೃಂದಾವನದಂತಹ ಆಧ್ಯಾತ್ಮಿಕ ಪ್ರೀತಿಯ ಸ್ಥಳಗಳೂ ಇಲ್ಲಿವೆ. ಪ್ರವಾಸೋದ್ಯಮ ಇಲಾಖೆ ಇಂತಹ ಡೆಸ್ಟಿನೇಷನ್ ವೆಡ್ಡಿಂಗ್‌ಗೆ 100 ಸ್ಥಳಗಳನ್ನು ರಾಜ್ಯದಲ್ಲಿ ಗುರುತಿಸಿದೆ. ಇದರಲ್ಲಿ ಪ್ರಮುಖ 10 ಐತಿಹಾಸಿಕ-ಪುರಾಣ ನಗರಗಳೂ ಇವೆ.
ಈ ರೀತಿಯ ಯೋಜನೆಗಳನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಹೋಟೆಲ್, ಸಾರಿಗೆ, ಫೋಟೋಗ್ರಾಫಿ, ಜ್ಯೂವೆಲರ್ಸ್, ಜವಳಿ, ಕ್ಯಾಟರಿಂಗ್ ಮತ್ತು ಮದುವೆ ಮಾರುಕಟ್ಟೆಗೆ ಸಂಬಂಧಿಸಿದ ಇತರೆ ಉದ್ಯಮಗಳು ಕೂಡ ಅಭಿವೃದ್ಧಿಯಾಗಲಿದ್ದು, ಆರ್ಥಿಕತೆಗೆ ಕೊಡುಗೆ ನೀಡಲಿದೆ. ಈಗಾಗಲೇ ಪಿಪಿಪಿ ಮಾದರಿಯಲ್ಲಿ ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ಹೋಟೆಲ್ಗಳು ಇಲ್ಲಿ ಉದ್ಯಮ ಸ್ಥಾಪನೆಗೆ ಉತ್ಸಾಹ ತೋರಿವೆ ಎಂದರು.
ಇದನ್ನೂ ಓದಿ: ಪೋಲೆಂಡ್ ಲವ್ಸ್ ಜಾರ್ಖಂಡ್: ಇನ್‌ಸ್ಟಾಗ್ರಾಮ್ ಪ್ರಿಯಕರನ ಮದುವೆಯಾಗಲು ಭಾರತಕ್ಕೆ ಬಂದ ಪ್ರಿಯತಮೆ