ಹರ್ದೋಯಿ (ಉತ್ತರ ಪ್ರದೇಶ): 15 ವರ್ಷದ ಬಾಲಕಿಯೊಬ್ಬಳು ಶಾಲೆಗೆ ಹೋಗುವಾಗ 20 ವರ್ಷದ ಸ್ಥಳೀಯ ಯುವಕನೋರ್ವ ಪ್ರತಿನಿತ್ಯ ಹಿಂಬಾಲಿಸುತ್ತಿದ್ದು ನೊಂದ ವಿದ್ಯಾರ್ಥಿನಿ ಶಾಲೆಗೆ ಹೋಗವುದನ್ನೇ ನಿಲ್ಲಿಸಿದ್ದಾಳೆ. ಅಷ್ಟೇ ಅಲ್ಲದೆ, ಆರೋಪಿಯು ತನ್ನ ಜೊತೆ ಸ್ನೇಹಕ್ಕೆ ಒಪ್ಪದಿದ್ದರೆ ಆಕೆಯ ಪೋಷಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಾಲಕಿಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಹರ್ದೋಯಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ, "ಬಾಲಕಿಯು ಖಾಸಗಿ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದು, ಆರೋಪಿ ಮೇಲಿನ ಭಯದಿಂದಾಗಿ ಕಳೆದ ಒಂದು ತಿಂಗಳಿನಿಂದ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾಳೆ. ನಾವು ತನಿಖೆಗೆ ತಂಡಗಳನ್ನು ರಚಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದು, ಯುವಕನ ಸೆರೆಗೆ ಬಲೆ ಬೀಸಿದ್ದೇವೆ" ಎಂದು ಹೇಳಿದರು.
ಮೊಹಬ್ಬತ್‌ಪುರ ಗ್ರಾಮದ ಪುನೀತ್ ಸಿಂಗ್ ಎಂಬಾತ ನನ್ನ ಮಗಳು ಶಾಲೆಗೆ ಹೋಗುವಾಗ ಪ್ರತಿದಿನ ಕಿರುಕುಳ ನೀಡುತ್ತಿದ್ದ. ಇದು ಕಳೆದ ಐದು ತಿಂಗಳಿಂದ ನಡೆಯುತ್ತಿದೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.
ಇದನ್ನೂ ಓದಿ : ಬಾಲಕಿ ಮೇಲೆ ಅತ್ಯಾಚಾರ ಯತ್ನ: ಆರೋಪಿಗಳನ್ನು ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು
"ಕಳೆದ ವಾರ ಆರೋಪಿಯು ತನ್ನ ಮಗಳಿಗೆ ಕಂಟ್ರಿಮೇಡ್ ಪಿಸ್ತೂಲ್ ತೋರಿಸಿ, ನೀನು ತನ್ನೊಂದಿಗೆ ಸಂಬಂಧ ಹೊಂದದಿದ್ದರೆ ನಿನ್ನ ತಂದೆ ತಾಯಿಯನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ಅವಳಿಗೆ ಪ್ರತಿನಿತ್ಯ ಮೊಬೈಲ್‌ನಲ್ಲಿ ವಿಡಿಯೋ ಕರೆಗಳನ್ನು ಮಾಡಿ ತೊಂದರೆ ನೀಡುತ್ತಿದ್ದ. ಯುವಕನ ಬೆದರಿಕೆಗೆ ಹೆದರಿ ನನ್ನ ಮಗಳು 8ನೇ ತರಗತಿಯ ಪರೀಕ್ಷೆಯನ್ನೂ ಬರೆಯಲಿಲ್ಲ" ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಇನ್ನೊಂದೆಡೆ, ಆರೋಪಿಯನ್ನು ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದು ಎಸ್‌ಹೆಚ್‌ಒ ಮಲ್ಲವನ್ ಶೇಷನಾಥ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿನಿ ಮತ್ತು ಸ್ಟಾರ್ಲಿಂಗ್ ಪಕ್ಷಿಯ 'ಪ್ರೇಮಕಥೆ' ಕೇಳಿದ್ರೆ ಶಾಕ್ ಆಗೋದು ಪಕ್ಕಾ!
ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಯತ್ನ: ಕಳೆದ ಮಾರ್ಚ್ ತಿಂಗಳ 29 ರಂದು ಬುದ್ಧಿಮಾಂದ್ಯ ಬಾಲಕಿ ಮೇಲೆ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಕಾರಣ ಗ್ರಾಮಸ್ಥರು ಧರ್ಮದೇಟು ನೀಡಿದ್ದ ಘಟನೆ ಹುಣಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಕಂಬಕ್ಕೆ ಕಟ್ಟಿ ಆರೋಪಿಯನ್ನು ಥಳಿಸಿದ್ದರು. ಮಹದೇವ (57) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಈತ ಬುದ್ಧಿಮಾಂದ್ಯ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರಕ್ಕೆ ಯತ್ನಿಸಿದಾಗ ಬಾಲಕಿ ಕೂಗಾಡಿದ್ದಾಳೆ. ಬಳಿಕ, ಕೂಗಾಟದ ಶಬ್ದ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ, ನಂತರ ಆರೋಪಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದರು. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ .. ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು