ಕಾಸ್ಗಂಜ್ : ಉತ್ತರಪ್ರದೇಶದಲ್ಲಿ ಕಳ್ಳಭಟ್ಟಿ ಸಾರಾಯಿ ಮಾಫಿಯಾ ಎಗ್ಗಿಲ್ಲದೇ ಸಾಗುತ್ತಿದೆ. ಈ ಮಾಫಿಯಾದ ಕಿಂಗ್ಪಿನ್ ಬಂಧಿಸಲು ವಾರೆಂಟ್ ಸಮೇತ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಮೇಲೆ ದುಷ್ಕರ್ಮಿಗಳು ದರ್ಪ ತೋರಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟಿರುವ ಘಟನೆ ನಾಗ್ಲಾ ಧೀಮರ್ ಗ್ರಾಮದಲ್ಲಿ ನಡೆದಿದೆ.
ನಾಗ್ಲಾ ಧೀಮರ್ ಗ್ರಾಮಕ್ಕೆ ಮಂಗಳವಾರ ಸಂಜೆ ಕಳ್ಳಭಟ್ಟಿ ಸಾರಾಯಿ ಕಿಂಗ್ಪಿನ್ ಆಗಿದ್ದ ಮೋತಿಯನ್ನು ಬಂಧಿಸಲು ವಾರೆಂಟ್ ಸಮೇತ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ದೇವೇಂದ್ರ ತೆರಳಿದ್ದರು. ಪೊಲೀಸರು ಬರುತ್ತಿದ್ದಂತೆ ಮೋತಿ ಸಹಚರರು ದಾಳಿ ಮಾಡಿ ಅವರ ಬಳಿಯಿದ್ದ ಗನ್ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ದೇವೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ ಗಂಭೀರವಾಗಿ ಗಾಯಗೊಂಡಿದ್ದರು. ಸುದ್ದಿ ತಿಳಿದ ಕೂಡಲೇ ಪೊಲೀಸ್ ತಂಡ ನಾಗ್ಲಾ ಧೀಮರ್ ಗ್ರಾಮಕ್ಕೆ ತೆರಳಿ ಅಶೋಕ್ರನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ಕಾಸ್ಗಂಜ್ ಜಿಲ್ಲಾಧಿಕಾರಿ ಚಂದ್ರಪ್ರಕಾಶ್ ಸಿಂಗ್ ಹೇಳಿದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆಗಿಳಿದರು. ರಾತ್ರಿಯಿಂದಲೇ ಪರಾರಿಯಾಗಿದ್ದ ಆರೋಪಿಗಳ ಜಾಲ ಹಿಡಿಯಲು ಪೊಲೀಸ್ ತಂಡ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಗ್ರಾಮದ ಹೊರವಲಯದ ಬಳಿಯಿರುವ ಕಾಳಿ ನದಿ ಸೇತುವೆ ಅಡಿಯಲ್ಲಿ ಆರೋಪಿಗಳು ಅಡಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿಗಳ ಗುಂಡಿನ ಕಾಳಗಕ್ಕೆ ಪೊಲೀಸರು ತಕ್ಕ ಉತ್ತರವೇ ನೀಡಿದ್ದಾರೆ.
ನಡೆದ ಎನ್ಕೌಂಟರ್ನಲ್ಲಿ ಕಿಂಗ್ಪಿನ್ ಮೋತಿ ಸಹೋದರ ಎಲ್ಕಾರ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಕಾಸ್ಗಂಜ್ ಜಿಲ್ಲಾ ಎಸ್ಪಿ ಮನೋಜ್ ಕುಮಾರ್ ಸೋನಾಕರ್ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಮೃತ ವ್ಯಕ್ತಿ ಕುಟುಂಬಸ್ಥರಿಗೆ 50 ಲಕ್ಷ ರೂಪಾಯಿ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಭರವಸೆಯನ್ನು ಯೋಗಿ ಆದಿತ್ಯನಾಥ್ ಸರ್ಕಾರ ಘೋಷಿಸಿದೆ. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಸಿಎಂ ಕಚೇರಿ ಆದೇಶಿಸಿದೆ.