ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಒಂದು ದಿನದ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ನೆಲಮಂಗಲ ಬಳಿ ಇರುವ ಧರ್ಮಸ್ಥಳದ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿರುವ ಅವರು, ಕ್ಷೇಮವನ ಉದ್ಘಾಟನೆ ಮಾಡಿದ್ದಾರೆ.
ರಾಜ್ಯಸಭಾ ಸದಸ್ಯರಾಗಿ ಹೊಸದಾಗಿ ನೇಮಕಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರ ಮನವಿ ಮೇರೆಗೆ ಯುಪಿ ಸಿಎಂ ರಾಜ್ಯಕ್ಕೆ ಆಗಮಿಸಿದ್ದಾರೆ. ಬೆಳಗ್ಗೆ ಉತ್ತರ ಪ್ರದೇಶದಿಂದ ಹೊರಟು 11.30ಕ್ಕೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿರು. ನಂತರ, ಬೆಳಗ್ಗೆ 11.55ಕ್ಕೆ ಎಸ್ಡಿಎಮ್ ಕೇಂದ್ರಕ್ಕೆ ತೆರಳಿದರು.
ಈ ವೇಳೆ ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸಚಿವರಾದ ಡಾ.ಕೆ. ಸುಧಾಕರ್, ಆನಂದ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಮಹದೇವಪುರ ಗ್ರಾಮದ ಸಮೀಪ 20 ಎಕರೆಯಲ್ಲಿ 93 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕ್ಷೇಮವನ ಬೆಂಗಳೂರು ಹಾಗೂ ಸುತ್ತಮುತ್ತಲ ಹತ್ತಾರು ಜಿಲ್ಲೆಯ ಜನರಿಗೆ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಅನುಕೂಲವಾಗಲಿದೆ. ಈ ಸಮಾರಂಭದ ಬಳಿಕ ಆದಿತ್ಯನಾಥ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸೌಹಾರ್ದಯುತ ಮಾತುಕತೆ ನಡೆಸಲಿದ್ದಾರೆ.