ಲಖನೌ (ಉತ್ತರ ಪ್ರದೇಶ): ಭಾರತೀಯ ಸೇನೆಯ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ದಳ ಐಎಸ್‌ಐ ಜೊತೆಗೆ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ಸಿಬ್ಬಂದಿಯನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಂಗಳವಾರ ಬಂಧಿಸಿದೆ.
ಶೈಲೇಶ್ ಬಂಧಿತ ವ್ಯಕ್ತಿ. ಈತ ಕಾನ್ಪುರದ ಕಾಸ್‌ಗಂಜ್ ನಿವಾಸಿಯಾಗಿದ್ದಾನೆ. ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್ ಮೂಲಕ ಸೇನಾ ಮಾಹಿತಿಯನ್ನು ಹಂಚಿಕೊಂಡಿದ್ದಾನೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನ್ನನ್ನು ಸೇನಾ ಯೋಧ ಎಂದು ಬಿಂಬಿಸಿಕೊಂಡಿದ್ದ ಬಂಧಿತ ಶೈಲೇಶ್, ಅರುಣಾಚಲ ಪ್ರದೇಶದ ಸೇನಾ ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸಹಚರನಾಗಿ 9 ತಿಂಗಳ ಕಾಲ ನಿಯೋಜನೆಗೊಂಡಿದ್ದ. ತಾನಿದ್ದ ಸೇನಾ ನೆಲೆಯ ಬಗ್ಗೆ ಸಾಕಷ್ಟು ರಹಸ್ಯ ಮಾಹಿತಿ ಸಂಗ್ರಹಿಸಿದ್ದ. ಇದಾದ ಬಳಿಕ ಶೈಲೇಶ್ ಪಾಕಿಸ್ತಾನದ ಐಎಸ್‌ಐ ಏಜೆಂಟ್‌ನೊಂದಿಗೆ ಸಂಪರ್ಕಕ್ಕೆ ಬಂದು, ಹಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ ಎಂದು ಎಟಿಎಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಎಟಿಎಸ್ ಮುಖ್ಯಸ್ಥ ಮೋಹಿತ್ ಅಗರ್ವಾಲ್, ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐಗಾಗಿ ಕಾರ್ಯನಿರ್ವಹಿಸುತ್ತಿರುವ ಅನೇಕ ಏಜೆಂಟರನ್ನು ಗೊಂಡಾ ಮತ್ತು ಮುಂಬೈನಿಂದ ಬಂಧಿಸಲಾಗಿತ್ತು. ಅವರ ವಿಚಾರಣೆಯ ವೇಳೆ ಕಾಸ್‌ಗಂಜ್ ನಿವಾಸಿ ಶೈಲೇಶ್ ಎಂಬಾತ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವ ಬಗ್ಗೆ ತಿಳಿದು ಬಂದಿತ್ತು. ಶೈಲೇಶ್ನ ಮೇಲೆ ನಿಗಾ ವಹಿಸಿದಾಗ ಸೇನೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಜೊತೆಗೆ ವಾಟ್ಸಾಪ್ ಮತ್ತು ಫೇಸ್‌ಬುಕ್ ಮೂಲಕ ಮಾಹಿತಿ ಹಂಚಿಕೊಂಡಿದ್ದು ಗೊತ್ತಾಗಿತ್ತು ಎಂದು ತಿಳಿಸಿದ್ದಾರೆ.
ಸೇನಾ ಯೋಧನಂತೆ ನಕಲಿ ವೇಷ: ಶೈಲೇಶ್ ಅರುಣಾಚಲ ಪ್ರದೇಶದಲ್ಲಿ ಸುಮಾರು ಒಂಬತ್ತು ತಿಂಗಳ ಕಾಲ ಭಾರತೀಯ ಸೇನೆಯಲ್ಲಿ ತಾತ್ಕಾಲಿಕ ಬೆಂಬಲಿಗರಾಗಿ ಕೆಲಸ ಮಾಡಿದ್ದ. ಆತ ಸೇನೆಯಲ್ಲಿ ಯಾವುದೇ ಹುದ್ದೆ ಹೊಂದಿಲ್ಲವಾದರೂ, ಯೋಧರ ಸಮವಸ್ತ್ರದಲ್ಲಿದ್ದ ಚಿತ್ರವನ್ನು ತಾನು ಬಳಸುತ್ತಿದ್ದ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರವಾಗಿ ಬಳಸಿಕೊಂಡಿದ್ದ. ಇದಲ್ಲದೇ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ಬರೆದುಕೊಂಡಿದ್ದ.
ಬಳಿಕ, ಶೈಲೇಶ್ ಫೇಸ್‌ಬುಕ್ ಮೂಲಕ ಪಾಕ್ ಏಜೆಂಟ್ ಹರ್ಲೀನ್ ಕೌರ್ ಸಂಪರ್ಕಕ್ಕೆ ಬಂದಿದ್ದಾನೆ. ಮೆಸೆಂಜರ್‌ನಲ್ಲಿ ಇಬ್ಬರೂ ಸಂಭಾಷಣೆ ನಡೆಸಿದ್ದಾರೆ. ವಾಟ್ಸಾಪ್‌ನಲ್ಲಿ ಇಬ್ಬರೂ ಆಡಿಯೊ, ವಿಡಿಯೋ ಕಾಲ್ ಮೂಲಕ ಮಾತನಾಡಿಕೊಂಡಿದ್ದಾರೆ. ಬಳಿಕ ಹರ್ಲಿನ್ ತನ್ನ ಪ್ರೇಮಪಾಶಕ್ಕೆ ಕೆಡವಿ, ಭಾರತೀಯ ಸೇನೆಯ ಮಾಹಿತಿಯನ್ನು ಸಂಗ್ರಹಿಸಿದ್ದಾಳೆ. ಆಕೆ ಐಎಸ್‌ಐ ಏಜೆಂಟ್ ಎಂದು ಪರಿಚಯಿಸಿಕೊಂಡಿದ್ದರೂ ಶೈಲೇಶ್ ರಹಸ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಹಣದ ಆಸೆಗಾಗಿ ಶೈಲೇಶ್ ಹರ್ಲಿನ್ ಕೌರ್ ಎಂದು ಪರಿಚಯಿಸಿಕೊಂಡ ಐಎಸ್‌ಐ ಏಜೆಂಟ್ ಜೊತೆಗೆ ಸೇನಾ ಮಾಹಿತಿಯನ್ನು ಹಂಚಿಕೊಂಡಿದ್ದಾಗಿ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಕೇರಳ ಯೋಧನ ಬೆನ್ನಿನ ಮೇಲೆ ಪಿಎಫ್ಐ ಬರಹ ಕೇಸ್ಗೆ ಬಿಗ್ ಟ್ವಿಸ್ಟ್: ಅಸಲಿ ಸತ್ಯ ಬಾಯ್ಬಿಟ್ಟ ಯೋಧನ ಸ್ನೇಹಿತ! ಏನದು ಗೊತ್ತಾ?