ಛತ್ತೀಸ್‌ಗಢ: ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ- 1956 ರ ನಿಬಂಧನೆಗಳ ಅಡಿಯಲ್ಲಿ ಅವಿವಾಹಿತ ಮಗಳು ಪೋಷಕರಿಂದ ತನ್ನ ಮದುವೆಯ ವೆಚ್ಚವನ್ನು ಪಡೆಯಬಹುದು ಎಂದು ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ. ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿ ಮದುವೆಗೂ ಮುನ್ನ ಮತ್ತು ಮದುವೆಯ ನಂತರ ಹಲವು ರೀತಿಯ ವೆಚ್ಚಗಳನ್ನು ಮಾಡಬೇಕಾಗುತ್ತದೆ. ಆ ಹಣವನ್ನು ಪೋಷಕರಿಂದ ಆಕೆ ಪಡೆಯಬಹುದು ಎಂದು ಕೋರ್ಟ್ ಹೇಳಿದೆ.
ಛತ್ತೀಸ್‌ಗಢದ ದುರ್ಗ ಜಿಲ್ಲೆಯ ರಾಜೇಶ್ವರಿ (35) ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಿಲಾಸ್‌ಪುರ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಹೊರಡಿಸಿತು. ನ್ಯಾಯಮೂರ್ತಿಗಳಾದ ಗೌತಮ್ ಭದೂರಿ ಮತ್ತು ನ್ಯಾ.ಸಂಜಯ್ ಎಸ್. ಅಗರವಾಲ್ ಅವರಿದ್ದ ಪೀಠವು ಈ ಸಂಬಂಧ ವಿಚಾರಣೆ ನಡೆಸಿ ಮಾರ್ಚ್ 21 ರಂದು ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆಯ ಅಡಿಯಲ್ಲಿ ಅವಿವಾಹಿತ ಮಗಳು ತನ್ನ ಮದುವೆಯ ಮೊತ್ತವನ್ನು ತನ್ನ ಪೋಷಕರಿಂದ ಪಡೆಯಬಹುದು ಎಂದು ತೀರ್ಪು ನೀಡಿದೆ. ಈ ಮೂಲಕ 2016 ರ ಏಪ್ರಿಲ್ 22 ರಂದು ದುರ್ಗ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಹೊರಡಿಸಿದ ಆದೇಶವನ್ನು ರದ್ದುಗೊಳಿಸಿತು.
ಪ್ರಕರಣದ ವಿವರ: ಭಿಲಾಯ್ ಸ್ಟೀಲ್ ಪ್ಲಾಂಟ್ (ಬಿಎಸ್‌ಪಿ) ಉದ್ಯೋಗಿಯಾಗಿರುವ ಭುನುರಾಮ್ ಅವರ ಪುತ್ರಿ ರಾಜೇಶ್ವರಿ ತನಗೆ ಮದುವೆ ಖರ್ಚು ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಭಾನುರಾಮ್ ಅವರು ನಿವೃತ್ತಿ ಹೊಂದಲಿದ್ದು, 55 ಲಕ್ಷ ರೂ ಪಿಂಚಣಿ ಪಡೆಯುವ ಸಾಧ್ಯತೆಯಿದೆ. ಹಾಗಾಗಿ, ಜೀವನಾಂಶಕ್ಕಾಗಿ ನನಗೆ 20 ಲಕ್ಷ ರೂ. ನೀಡುವಂತೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಿಸಿದ ಕೌಟುಂಬಿಕ ನ್ಯಾಯಾಲಯವು ಜನವರಿ 7, 2016 ರಂದು ಇದಕ್ಕೆ ಅವಕಾಶವಿಲ್ಲವೆಂದು ಅರ್ಜಿ ವಜಾಗೊಳಿಸಿತ್ತು.
ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜೇಶ್ವರಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಾನೂನಿನ ಪ್ರಕಾರ ಅವಿವಾಹಿತ ಮಗಳು ತನ್ನ ತಂದೆಯಿಂದ ಮದುವೆಯ ವೆಚ್ಚವನ್ನು ಕೇಳಬಹುದು, ಈ ವೆಚ್ಚವು ಜೀವನ ನಿರ್ವಹಣೆಯ ವ್ಯಾಪ್ತಿಗೆ ಬರುತ್ತದೆ ಎಂದು ಅರ್ಜಿದಾರರ ಪರ ವಕೀಲ ಎ.ಕೆ.ತಿವಾರಿ ವಾದ ಮಂಡಿಸಿದರು. ವಿಚಾರಣೆ ಆಲಿಸಿದ ಪೀಠ ಮಹತ್ವದ ತೀರ್ಪು ಹೊರಡಿಸಿದೆ.
ಇದನ್ನೂ ಓದಿ: ಅಮಿತ್ ಶಾ ರಾಜ್ಯ ಪ್ರವಾಸ: ಇಂದು ಮಹತ್ವದ ಕೋರ್ ಕಮಿಟಿ ಸಭೆ