ಬಿಲಾಸ್‌ಪುರ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಇಬ್ಬರು ವಯೋವೃದ್ಧರು ನಡೆಸಿದ ವಿಶಿಷ್ಟ ರೀತಿಯ ಪ್ರತಿಭಟನೆ ಜನರ ಗಮನ ಸೆಳೆಯುತ್ತಿದೆ. ಇದರಲ್ಲಿ ಓರ್ವ ವಯೋವೃದ್ಧ ಪ್ರತಿಭಟನಾಕಾರರೊಬ್ಬರು, ತಾವು ಕಳೆದುಕೊಂಡ ಜಮೀನಿನ ಮೇಲೆ ಹಕ್ಕು ಮತ್ತು ಸರ್ಕಾರಿ ಭೂಮಿ ದಾಖಲೆಗಳಲ್ಲಿ ನಮೂದು ಕೋರಿ ಜಮೀನಿನ ನಕ್ಷೆಯನ್ನು ಆಯತಾಕಾರದ ಬಟ್ಟೆಯ ಮೇಲೆ ಪ್ರದರ್ಶಿಸಿ, ಪ್ರತಿಭಟಿಸುತ್ತಿದ್ದಾರೆ.
ಬಿಲಾಸ್‌ಪುರ ನಗರದ ಸಮೀಪದಲ್ಲಿರುವ ಬಿರ್‌ಕೋನಾ ಗ್ರಾಮದ 80 ವರ್ಷದ ಲಾಟೆಲ್‌ರಾಮ್ ಯಾದವ್ ಅವರು, ಬಟ್ಟೆಯ ಮೇಲೆ ಮುದ್ರಿತವಾಗಿರುವ ತಮ್ಮ ಜಮೀನಿನ ನಕ್ಷೆಯನ್ನು ಹಿಡಿದುಕೊಂಡು, ಪ್ರತಿಭಟನೆ ನಡೆಸುತ್ತಿದ್ದಾರೆ. ಭೂಗಳ್ಳರು ನಮ್ಮ ಜಮೀನಿನ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ, ನಾನು ಹೊಂದಿರುವ ಭೂಮಿಯನ್ನು ಸರ್ಕಾರವು ಹುಲ್ಲುಗಾವಲು ಪ್ರದೇಶ ಎಂದು ಘೋಷಿಸಿದೆ. ಕೆಲವು ಸರ್ಕಾರಿ ಅಧಿಕಾರಿಗಳು ಭೂಮಾಫಿಯಾದೊಂದಿಗೆ ಶಾಮೀಲಾಗಿ ಆ ಭೂಮಿಯನ್ನು ಕಬಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮತ್ತೊಬ್ಬ ವೃದ್ಧ ನಂದಕುಮಾರ್ ಶುಕ್ಲಾ ಅವರು ಕಳೆದ 15 ವರ್ಷಗಳಿಂದ ಛತ್ತೀಸ್‌ಗಢಿಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಇವರು ಬಿಳಿ ಬಣ್ಣದ ಬಟ್ಟೆ ಹಾಗೂ ಕ್ಯಾಪ್ ಧರಿಸಿದ್ದು, ಅದರ ಮೇಲೆ ಛತ್ತೀಸ್‌ಗಢಿ ಭಾಷೆಯಲ್ಲಿ ಘೋಷಣೆಗಳನ್ನು ಬರೆಯಲಾಗಿದೆ.
ಇದನ್ನೂ ಓದಿ: 1998ರಿಂದಲೂ ಮಳೆಗಾಲದ 4 ತಿಂಗಳು ಗಿಳಿಗಳಿಗೆ ಆಹಾರ ನೀಡುತ್ತಿರುವ ಪಕ್ಷಿಪ್ರೇಮಿ ಕುಟುಂಬ
ಈ ಸಂಬಂಧ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಛತ್ತೀಸ್‌ಗಢಿ ಭಾಷೆ ಬೋಧನೆಯ ಮಾಧ್ಯಮವಾಗಿಲ್ಲ. ಛತ್ತೀಸ್‌ಗಢಿಯನ್ನು ಹಿಂದಿಯೊಂದಿಗೆ ಕಲಿಸಲಾಗುತ್ತಿದೆ. ಆದ್ದರಿಂದ, ಶಿಕ್ಷಕರು ಮೊದಲು ಹಿಂದಿಯನ್ನು ಓದಿ ನಂತರ ಛತ್ತೀಸ್‌ಗಢಿಗೆ ಅನುವಾದಿಸುತ್ತಾರೆ. ಛತ್ತೀಸ್‌ಗಢಿಯನ್ನು ಸರ್ಕಾರಿ ಶಾಲೆಗಳಲ್ಲಿ ನೇರವಾಗಿ ಕಲಿಸಲಾಗುವುದಿಲ್ಲ ಎಂದು ಆರೋಪಿಸಿದ್ದಾರೆ.