ಬಾರಾಬಂಕಿ: ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಅಕ್ಟೋಬರ್ 18 ರಂದು ಮಂಗಳವಾರ ಐತಿಹಾಸಿಕ ದೇವನ್ ಜಾತ್ರೆ ಜರುಗಿತು. ಈ ಜಾತ್ರೆಯ ಪ್ರಮುಖ ಘಟ್ಟ ಕುದುರೆ ಮಾರುಕಟ್ಟೆ ಪ್ರದರ್ಶನವು ದೇಶದಲ್ಲಷ್ಟೇ ಅಲ್ಲ ವಿದೇಶದಲ್ಲೂ ಖ್ಯಾತಿ ಪಡೆದಿದೆ.
50 ಲಕ್ಷದಿಂದ ಒಂದು ಕೋಟಿ ರೂಪಾಯಿವರೆಗೆ ಬೆಲೆ.. ಈ ದೇವನ್ ಜಾತ್ರೆಯಲ್ಲಿ ಸಿಂಗಾರಗೊಂಡಿರುವ ಕುದುರೆ ಮಾರುಕಟ್ಟೆ ಬಲಿಷ್ಠ ಕುದುರೆಗಳನ್ನು ನೋಡುವುದೇ ಜನರಿಗೆ ರಸದೌತಣ. ಬಲಿಷ್ಠ ಕುದುರೆಗಳನ್ನು ನೋಡಲು, ಖರೀದಿಗೆ ನಾನಾ ಕಡೆಗಳಿಂದ ಬಹಳಷ್ಟು ಜನರು ಇಲ್ಲಿಗೆ ಬಂದಿರುತ್ತಾರೆ. ಆದರೆ ಕುದುರೆಗಳ ಬೆಲೆ ಮಾತ್ರ ಸುಮಾರು 50 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂ. ವರೆಗೆ ವ್ಯಾಪಾರ ಕುದುರುವುದು ಸಹಜ.
ಕುದುರೆಗಳ ಮೈಕಟ್ಟು ನೋಡಿ ಬೆಲೆ ನಿಗದಿ.. ಕುದುರೆಗಳನ್ನು ಸಾಕಲು ಇಷ್ಟಪಡುವ ಜನರು ಖಂಡಿತವಾಗಿಯೂ ಇಲ್ಲಿಗೆ ಬಂದೇ ಬರುತ್ತಾರೆ. ಅಂತಹವರಿಗೆ ಈ ಜಾತ್ರೆಯಲ್ಲಿ ಬಗೆ ಬಗೆಯ ಹಾಗೂ ವಿವಿಧ ತಳಿಯ ಕುದುರೆಗಳ ದರ್ಶನ ಸಿಗಲಿದೆ. ಬಿಹಾರದ ಸೋನ್‌ಪುರ್, ರಾಜಸ್ಥಾನದ ಪುಷ್ಕರ್ ಜಾತ್ರೆಯ ನಂತರ ಈ ದೇವನ್ ಜಾತ್ರೆಯ ಕುದುರೆ ಮಾರುಕಟ್ಟೆ ಹೆಗ್ಗರುತು ಮೂಡಿಸಿದೆ. ದೇವನ್ ಜಾತ್ರೆಯಲ್ಲಿ ನೂರಾರು ಅಂಗಡಿಗಳು ಮತ್ತು ನಾನಾ ಪ್ರದರ್ಶನಗಳು ಸಹ ಇವೆ. ಉತ್ತರಪ್ರದೇಶದ ಅತಿದೊಡ್ಡ ಕುದುರೆ ಮೇಳ ಇದಾಗಿದ್ದು ದೇಶದ ವಿವಿಧ ಭಾಗದ ಜನರು ತಾವು ಸಾಕಿದ ಕುದುರೆಗಳನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಕುದುರೆಯ ಎತ್ತರ, ತಡಿ ಮತ್ತು ನಡಿಗೆಗೆ ಅನುಗುಣವಾಗಿ ಅವುಗಳ ಬೆಲೆಯನ್ನು ನಿರ್ಧರಿಸಲಾಗುತ್ತದೆ.
ಈ ಬಾರಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯೂ ಸಹ ಕುದುರೆ ಮಾರುಕಟ್ಟೆಯ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮ ಬೀರಿದೆ. ಕುದುರೆ ಖರೀದಿಗೆ ಬರುವರ ಸಂಖ್ಯೆಯಲ್ಲೂ ತೀರಾ ಕಡಿಮೆ ಆಗಿದೆ ಎನ್ನುತ್ತಾರೆ ಕುದುರೆ ಸಾಕಣೆದಾರರು. ಆರ್ಥಿಕ ಹಿನ್ನಡೆ ಹಾಗೂ ಜಾತ್ರೆಯಲ್ಲಿನ ಸೌಲಭ್ಯಗಳ ಕೊರತೆ ಪರಿಣಾಮ ಈ ಬಾರಿ ಕುದುರೆ ಮಾರುಕಟ್ಟೆಯ ಮೇಲೂ ಗೋಚರಿಸಿದೆ. ಆದರೆ ಇಲ್ಲಿನ ರಾಜ್ಯ ಸರ್ಕಾರ ಬಾರಾಬಂಕಿಯ ಕುದುರೆ ಮಾರುಕಟ್ಟೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ ಮೇಳಕ್ಕೆ ಕಳೆ ತುಂಬಬೇಕು ಎಂಬುದು ಪ್ರೇಕ್ಷಕರ ಮನವಿಯಾಗಿದೆ.