ಚುರು (ರಾಜಸ್ಥಾನ): ದೇಹದ ಅಂಗಾಗಗಳು ಊನವಾಗಿ ಅದೆಷ್ಟೋ ಮಕ್ಕಳು ಹುಟ್ಟುತ್ತಾರೆ. ಆದರೆ ರತಂಗರ್ನ ಚುರು ಪ್ರದೇಶದಲ್ಲಿ ನಾಲ್ಕು ಕೈ ಕಾಲುಗಳಿರುವ ವಿಚಿತ್ರ ಮಗುವೊಂದು ಜನಿಸಿರುವ ವಿಶಿಷ್ಟ ಪ್ರಕರಣ ವರದಿಯಾಗಿದೆ. ರತನ್‌ಗಢದ ಗಂಗಾರಾಮ್ ಎಂಬ ಖಾಸಗಿ ಆಸ್ಪತ್ರೆಯಲ್ಲಿ ವಿಚಿತ್ರ ನವಜಾತ ಶಿಶುವೊಂದು ಜನಿಸಿದೆ. ನಾಲ್ಕು ಕೈಗಳು, ನಾಲ್ಕು ಕಾಲುಗಳು ಇರುವ ದೇಹ ಅಂಟಿಕೊಂಡಂತೆ ಜನಿಸಿರುವ ಹೆಣ್ಣು ಮಗು ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದೆ.
ಗಂಗಾರಾಮ್ ಆಸ್ಪತ್ರೆಯ ವೈದ್ಯರು ವಿಚಿತ್ರ ಮಗುವನ್ನು ಹೊಟ್ಟೆಯಲ್ಲಿ ಹೊತ್ತು ಬಂದಿದ್ದ ತಾಯಿಗೆ ಸಾಮಾನ್ಯ ಹೆರಿಗೆ ಮಾಡಿಸಿದ್ದಾರೆ. ಮಗು ಹುಟ್ಟಿದ 20 ನಿಮಿಷಕ್ಕೆ ಸಾವನ್ನಪ್ಪಿದ್ದು, ತಾಯಿ ಈಗ ಆರೋಗ್ಯವಾಗಿದ್ದಾರೆ. ಈ ಘಟನೆ ಸ್ಥಳೀಯ ಜನರಲ್ಲಿ ಮಾತ್ರವಲ್ಲದೇ ರಾಜ್ಯದೆಲ್ಲೆಡೆ ಅಚ್ಚರಿ ಮೂಡಿಸಿದೆ.
ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ರಾಜಲ್‌ದೇಸರ ವಾರ್ಡ್ 3ರ ನಿವಾಸಿ ಹಜಾರ್ಸಿ ಸಿಂಗ್ ಅವರ ಪತ್ನಿ 19 ವರ್ಷದ ಗರ್ಭಿಣಿ ಮಮತಾ ಕನ್ವರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ವೈದ್ಯರ ಸಲಹೆ ಮೇರೆಗೆ ಸೋನೋಗ್ರಫಿ ಮಾಡಲಾಯಿತು. ಸೋನೋಗ್ರಫಿ ವೇಳೆ ಮಹಿಳೆಯ ಹೊಟ್ಟೆಯಲ್ಲಿ ವಿಚಿತ್ರವಾದ ಮಗು ಇರುವುದು ಪತ್ತೆಯಾಗಿದೆ. ಅದೇ ವೇಳೆ, ಆ ಮಗುವಿಗೆ ಎರಡು ಹೃದಯ ಬಡಿತಗಳು ಇರುವುದೂ ಅನುಭವಕ್ಕೆ ಬಂದಿದೆ. ಆಸ್ಪತ್ರೆಗೆ ದಾಖಲಾದ ಸುಮಾರು ಒಂದು ಗಂಟೆಯ ನಂತರ ಯಾವುದೇ ಆಪರೇಷನ್ ಮಾಡದೇ ಸಾಮಾನ್ಯ ಹೆರಿಗೆಯಲ್ಲಿಯೇ ತಾಯಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಡಾ ಕೈಲಾಶ್ ಸೊಂಗಾರ ತಿಳಿಸಿದ್ದಾರೆ.
ಅದು ಹೆಣ್ಣು ಮಗುವಾಗಿದ್ದು, ಹೆರಿಗೆಯ ನಂತರ ನವಜಾತ ಶಿಶು ಜೀವಂತವಾಗಿಯೇ ಇತ್ತು. ಭೂಮಿಗೆ ಬಂದ ಸುಮಾರು 20 ನಿಮಿಷಗಳ ನಂತರ ವಿಚಿತ್ರ ಮಗು ಸಾವನ್ನಪ್ಪಿದೆ. ನವಜಾತ ಶಿಶುವಿಗೆ ತಲೆ, ನಾಲ್ಕು ಕೈಗಳು, ನಾಲ್ಕು ಕಾಲುಗಳು ಮತ್ತು ಎರಡು ಬೆನ್ನುಹುರಿಗಳೊಂದಿಗೆ ಎರಡು ಹೃದಯಗಳಿದ್ದವು ಎಂದು ಡಾ. ಕೈಲಾಶ್ ಸೊಂಗರಾ ಹೇಳಿದರು.
ಮಮತಾ ಕನ್ವರ್ ಅವರು ಗರ್ಭಿಣಿಯಾಗಿದ್ದಾಗ ಇತರ ಖಾಸಗಿ ಆಸ್ಪತ್ರೆಯಲ್ಲಿ ಸೋನೋಗ್ರಫಿ ಮಾಡಿಸಿಕೊಂಡಿದ್ದಾರೆ. ಆದರೆ, ಆ ಎಲ್ಲಾ ಆಸ್ಪತ್ರೆಗಳಲ್ಲಿ ಹೊಟ್ಟೆಯಲ್ಲಿರುವ ಮಗು ಆರೋಗ್ಯವಾಗಿದೆ ಎಂದೇ ಹೇಳಲಾಗಿತ್ತು. ಈ ಥರದ ಮಗು ಇರುವಾಗ ಸಾಮಾನ್ಯ ಹೆರಿಗೆ ಮಾಡಿಸುವುದು ತುಂಬಾ ವಿರಳ. ಇಷ್ಟು ಕಷ್ಟದ ಹೆರಿಗೆಯನ್ನು ನಾರ್ಮಲ್ ಹೆರಿಗೆ ಮಾಡಿಸುವುದು ನಮ್ಮ ವೈದ್ಯರ ತಂಡಕ್ಕೂ ಸವಾಲಾಗಿತ್ತು. ಆದರೆ, ಸಕಾಲದಲ್ಲಿ ನಾರ್ಮಲ್ ಡೆಲಿವರಿ ಮಾಡಿ ತಾಯಿಯ ಜೀವ ಉಳಿಸಲಾಗಿದೆ. ಆದರೆ ನವಜಾತ ಶಿಶು ಜನಿಸಿದ 20 ನಿಮಿಷಗಳ ನಂತರ ಸಾವನ್ನಪ್ಪಿದೆ. ತಾಯಿ ಈಗ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಈ ರೀತಿಯ ಹೆರಿಗೆಯನ್ನು ಕಾಂಜುನೋಕಲ್ ಅನೋಮಲಿ ಎಂದು ಕರೆಯಲಾಗುತ್ತದೆ ಎಂದು ಡಾ. ರೀಟಾ ಸೊಂಗರಾ ಹೇಳಿದ್ದಾರೆ.
ಇದನ್ನೂ ಓದಿ: ಅವಧಿಗೆ ಮುನ್ನ ತಾಯಿಗೆ ಹೆರಿಗೆ: 700 ಗ್ರಾಂ ತೂಕದ ಮಗು ಜನನ, ತಾಯಿ ಗರ್ಭದಂತೆ ವಾತಾವರಣ ಸೃಷ್ಟಿಸಿ ಗದಗ ವೈದ್ಯರಿಂದ ಚಿಕಿತ್ಸೆ